ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಓರ್ವರನ್ನು ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಕ್ರಂ ಆಮ್ಟೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ನಗರದ ಹೊರವಲಯದ ಹರಿಗೆ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಇರ್ಫಾನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ಗಾಗಿ ಕಾಯುತ್ತಿದ್ದರು.
ಕಾರ್ಯ ನಿಮಿತ್ತ ಭದ್ರಾವತಿಗೆ ತೆರಳಿ ಅದೇ ಮಾರ್ಗವಾಗಿ ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದ ಹೆಚ್ಚುವರಿ ಎಎಸ್ಪಿ ವಿಕ್ರಂ ಆಮ್ಟೆ ಅವರು ಅಪಘಾತ ಗಮನಿಸಿ ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಗಾಯಾಳುವನ್ನು ಸಾರ್ವಜನಿಕರ ನೆರವಿನೊಂದಿಗೆ ತಮ್ಮ ಕಾರಿನಲ್ಲಿಯೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಅಸುನೀಗಿದ್ದಾರೆ.