ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ನೆವಟೂರು ಗ್ರಾಮದಲ್ಲಿ ಜಮೀನಿನ ವಿಚಾರದಲ್ಲಿ ಅಮಾಯಕನೊಬ್ಬನ ಮೇಲೆ ನೆರೆಮನೆಯ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ನೆವಟೂರು ಗ್ರಾಮದ ನವೀನ್ ಕುಮಾರ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಗಾಯಾಳು ಮೆಗ್ಗಾನ್ ಗೆ ದಾಖಲಾಗಿದ್ದಾನೆ.
ತನ್ನ ಜಮೀನಿನಲ್ಲಿ ಜೆಸಿಬಿ ಯಲ್ಲಿ ಟ್ರಂಚ್ ಹೊಡೆಸುತಿದ್ದ ಪಕ್ಕದ ಮನೆಯ ಪದ್ಮನಾಭ ಎಂಬುವವರ ಬಳಿ ಯಾಕೆ ನನ್ನ ಜಾಗದಲ್ಲಿ ಟ್ರಂಚ್ ಮಾಡುತಿದ್ದೀರಿ ಎಂದು ಕೇಳಿದ್ದಕ್ಕೆ ಏಕಾಏಕಿ ಪಕ್ಕದ ಮನೆಯ ಪದ್ಮನಾಭ ಮತ್ತು ಆತನ ಮಗ ಸಂದೀಪ ಎಂಬಾತನು ನವೀನ್ ಕುಮಾರ್ ಮೇಲೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎದುರುಗಡೆ ಮನೆಯವರು ಗಲಾಟೆ ಬಿಡಿಸಿದ್ದಾರೆ.
ಹಲ್ಲೆಗೊಳಗಾದ ನವೀನ್ ಆಸ್ಪತ್ರೆಗೆ ಹೊರಟಿದ್ದಾರೆ ಆಗ ಹಲ್ಲೆ ಮಾಡಿದ ವ್ಯಕ್ತಿಗಳೇ ಅಡ್ಡಗಟ್ಟಿ ಹೇಗೆ ಆಸ್ಪತ್ರೆಗೆ ಹೋಗುತ್ತೀರಾ ನೋಡಿಕೊಳ್ಳುತ್ತೇವೆ’ ಎಂದು ಹೆದರಿಸಿ ಜೀವ ಭಯ ಉಂಟು ಮಾಡಿದ್ದಾರೆ.ಗಾಯಾಳು ಮತ್ತು ಆತನ ಪತ್ನಿ ಮತ್ತು ಮಕ್ಕಳು ಒಂದು ರಾತ್ರಿಯಿಡೀ ಜೀವ ಭಯದಲ್ಲಿ ಮನೆಯಲ್ಲಿಯೇ ಇದ್ದಾರೆ.
ಇಂದು ಈ ಬಗ್ಗೆ ಮಾಹಿತಿ ಅರಿತ ಪಟ್ಟಣದ ದೇವರಾಜ್ ಶಿಂಧೆ ಮತ್ತು ಷಣ್ಮುಖ ಎಂಬುವವರು 108 ರ ಅಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ಕಳುಹಿಸಿಕೊಟ್ಟಿದ್ದಾರೆ.
ಘಟನೆಯ ಹಿನ್ನಲೆಯಲ್ಲಿ ನೆವಟೂರು ಗ್ರಾಮದ ಪದ್ಮನಾಭ್, ಸಂದೀಪ್ ಮತ್ತು ಶಿವಮ್ಮ ಎಂಬುವವರ ಮೇಲೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.