ರಿಪ್ಪನ್‌ಪೇಟೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ ಪ್ರಕರಣ – ಸಾರ್ವಜನಿಕರಲ್ಲಿ ಆತಂಕ | ರೋಗದ ಲಕ್ಷಣ , ಮುಂಜಾಗ್ರತಾ ಕ್ರಮಗಳೇನು..??
ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ರೋಗವು ತೀವ್ರಗತಿಯಲ್ಲಿ ಹಬ್ಬುತ್ತಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಮೂಡಿಸಿದೆ. ಮಳೆಯು ಜಿಲ್ಲೆಯನ್ನು ಪ್ರವೇಶಿಸಿ, ತಾಲೂಕಿನಾದ್ಯಂತ ಮಳೆ ಹಾಗೂ ಬಿಸಿಲಿನ ವಾತಾವರಣವಿದೆ. ಈ ಉಷ್ಣಾಂಶದಲ್ಲಿ ಸೊಳ್ಳೆಯ ಸಂತತಿ ವೃದ್ಧಿಯಾಗುವುದರಿಂದ ಡೆಂಗ್ಯೂ ರೋಗದ ಭೀತಿ ಜೋರಾಗಿದೆ.
ಅಂದಾಜಿನ ಪ್ರಕಾರ ಪಟ್ಟಣದ ವ್ಯಾಪ್ತಿಯಲ್ಲಿ 10 ರಿಂದ 15 ಡೆಂಗ್ಯೂ ಪ್ರಕರಣಗಳು ಕಡುಬಂದಿದೆ.
ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಪ್ರಕರಣಗಳನ್ನು ಏಕಾಏಕಿ ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆ ಸಮಗ್ರ ಸೊಳ್ಳೆ ನಿರ್ಮೂಲನಾ ಲಾರ್ವಾ ಸಮೀಕ್ಷೆಯನ್ನು ಜೂ.15 ರಂದು ನಡೆಸಲು ನಿರ್ಧರಿಸಿದೆ.
ಡೆಂಗ್ಯೂ ಪ್ರಕರಣದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡ ಅಂಕಿಅಂಶಗಳು ಮಾತ್ರ ಲಭ್ಯವಾಗುತ್ತವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಅಂಕಿಅಂಶಗಳು ಬೆಳಕಿಗೆ ಬರುವುದಿಲ್ಲ. ಖಾಸಗಿ ಆಸ್ಪತ್ರೆಗಳೂ ಲೆಕ್ಕ ಕೊಟ್ಟರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದು ಪಟ್ಟಣದ ಗ್ರಾಮಾಡಳಿತದ ವತಿಯಿಂದ ಜೂನ್ 14 ರ ಶುಕ್ರವಾರ ಪಟ್ಟಣದಾದ್ಯಂತ ಸೊಳ್ಳೆಗಳ ಹಾಟ್ ಸ್ಪಾಟ್ ಗಳಲ್ಲಿ ಔಷದಿ ಸಿಂಪಡಿಸಲು ನಿರ್ಧರಿಸಿರುವುದರಿಂದ ಶುಕ್ರವಾರದಂದು ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕಬೇಕೆಂದು ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮನವಿ ಮಾಡಿದ್ದಾರೆ.
ಡೆಂಗ್ಯೂ ವೈರಸ್‌ನಿಂದ ಹರಡುವ ರೋಗವಾಗಿದ್ದು, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1,DENV2,DENV3,DENV4 ಎಂಬ ನಾಲ್ಕು ವಿಧದ ವೈರಸ್‌ಗಳಿಂದ ಇದು ಹರಡುತ್ತಿದೆ.
ಸೋಂಕು ರೋಗಗಳಲ್ಲಿ ಅತ್ಯಂತ ಅಪಾಯಕಾರಿಯಾದದ್ದು ಡೆಂಗ್ಯೂ. ಇದು ಸೊಳ್ಳೆಗಳ ಮೂಲಕ ಹರಡುವ ಭಯಂಕರವಾದ ಕಾಯಿಲೆ. ಏಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಈ ಸೊಳ್ಳೆಯನ್ನು ಟೈಗರ್ ಸೊಳ್ಳೆ ಎಂದು ಕರೆಯುವುದುಂಟು. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ.
ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?
ಈ ಸೊಳ್ಳೆ ಕಡಿದ ಐದರಿಂದ ಎಂಟು ದಿನಗಳ ಬಳಿಕ ರೋಗದ ಲಕ್ಷಣಗಳು ಕಾಣಿಸುತ್ತವೆ. ಅದೇ ರೀತಿ ಡೆಂಗ್ಯೂ ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದರೂ ಈ ವೈರಸ್ ವ್ಯಾಪಿಸುತ್ತದೆ.
ಸದ್ಯಕ್ಕೆ ಮಳೆ ಬೀಳುತ್ತಿರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಕಾಲದಲ್ಲೇ ಡೆಂಗ್ಯೂ ಸೋಂಕು ಹರಡುತ್ತದೆ. ಆದಕಾರಣ ಈ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಉತ್ತಮ.
ಉದ್ದ ತೋಳಿನ ಬಟ್ಟೆ, ಸಾಕ್ಸ್ ಮತ್ತು ಶೂಸ್ ಗಳನ್ನು ಧರಿಸಿ
ಡೆಂಗ್ಯೂವನ್ನು ನಿವಾರಿಸಲು ಯಾವುದೇ ಲಸಿಕೆಗಳು ಲಭ್ಯವಿಲ್ಲ. ಡೆಂಗ್ಯೂವನ್ನು ನಿವಾರಿಸಲು ಇರುವ ಅತ್ಯುತ್ತಮ ನಿವಾರಣೋಪಾಯ ಎಂದರೆ ಅದು ಸೊಳ್ಳೆಗಳಿಂದ ಕಡಿಸಿಕೊಳ್ಳದೆ ಇರುವಿಕೆಯಾಗಿರುತ್ತದೆ. ಸೊಳ್ಳೆ ನಿವಾರಕಗಳು (ರಿಪೆಲ್ಲೆಂಟ್‌ಗಳು), ಸೊಳ್ಳೆ ಪರದೆಗಳು, ಮೆಶ್ ಗಳು ಮತ್ತು ಮನೆಯಿಂದ ಹೊರಗೆ ಇರುವ ಸಂದರ್ಭದಲ್ಲಿ ಉದ್ದ ತೋಳಿನ ಬಟ್ಟೆಗಳನ್ನು, ಸಾಕ್ಸ್‌ಗಳನ್ನು ಮತ್ತು ಬೂಟ್‌ಗಳನ್ನು ಧರಿಸುವ ಮೂಲಕ ಡೆಂಗ್ಯೂವನ್ನು ನಿವಾರಿಸಿಕೊಳ್ಳಬಹುದು.
ಹೂಕುಂಡಗಳು, ನೀರಿನ ತೊಟ್ಟಿಯಲ್ಲಿ ನೀರುನಿಲ್ಲದಂತೆ ನೋಡಿಕೊಳ್ಳಿ
ಏಡಿಸ್ ಈಜಿಪ್ಟಿ ಸೊಳ್ಳೆಗಳು ಹೂಕುಂಡಗಳು, ನೀರಿನ ತೊಟ್ಟಿಗಳು, ಟೈರ್ ಗಳಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಇದರ ಮೊಟ್ಟೆಗಳು ಒಣ ಸ್ಥಿತಿಯಲ್ಲಿಯೇ ಒಂದು ವರ್ಷದವರೆಗೆ ಜೀವಿಸುತ್ತವೆ. ನಿಮ್ಮ ಮನೆಯ ಅಕ್ಕ-ಪಕ್ಕ ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಟೈರ್‌ಗಳು ಮತ್ತಿತರ ವಸ್ತು ಮತ್ತು ಸ್ಥಳಗಳನ್ನು ಸ್ವಚ್ಛ ಮಾಡಿ, ನೀರು ನಿಲ್ಲದಂತೆ ಮಾಡುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದು.
ರೋಗದ ಲಕ್ಷಣಗಳು..
ತೀವ್ರವಾದ ತಲೆನೋವುಃ ಡೆಂಗ್ಯೂ ಲಕ್ಷಣಗಳಲ್ಲಿ ಮುಖ್ಯವಾದದ್ದು ತಲೆನೋವು. ಡೆಂಗ್ಯೂ ಸೋಕಿದವರಿಗೆ ವಿಪರೀತ ತಲೆನೋವು ಇರುತ್ತದೆ. ತಲೆ ಭಾರವಾಗಿ ಇರುತ್ತದೆ. ಜ್ವರಃ ಡೆಂಗ್ಯೂ ಸೋಂಕು ಇರುವರಿಗೆ ಜ್ವರ ಬರುತ್ತಾ, ಬಿಡುತ್ತಾ ಇರುತ್ತದೆ. ಒಂದೊಂದು ಸಲ ಜ್ವರದ ತೀವ್ರತೆ 104 ಡಿಗ್ರಿ ಫಾರನ್ ಹೀಟ್ ವರೆಗೂ ಹೆಚ್ಚಾಗಬಹುದು. ಈ ರೀತಿ ನಿತ್ಯ ಆಗುತ್ತಿದ್ದರೆ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಆ ಜ್ವರ ಡೆಂಗ್ಯೂಗೆ ದಾರಿಯಾಗಬಹುದು.
ಕೀಲು ನೋವುಃ ಡೆಂಗ್ಯೂ ಕಾಯಿಲೆ ಬಂದರೆ ಕೀಲು ನೋವು, ಸ್ನಾಯುಗಳ ನೋವು ಹೆಚ್ಚಾಗಿ ಇರುತ್ತದೆ. ರಕ್ತಸ್ರಾವಃ ಡೆಂಗ್ಯೂ ಲಕ್ಷಣಗಳಲ್ಲಿ ಇದು ಮುಖ್ಯವಾದದ್ದು. ಡೆಂಗ್ಯೂ ಇದ್ದರೆ ಮೂಗಿನಿಂದ ರಕ್ತಸ್ರಾವ ಆಗುತ್ತಿರುತ್ತದೆ. ಕಾಯಿಲೆ ತೀವ್ರಗೊಂಡರೆ ಈ ರಕ್ತಸ್ರಾವ ಅಧಿಕವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸಾಯುವ ಸಾಧ್ಯತೆಗಳಿರುತ್ತವೆ.
ವಾಂತಿ ಮತ್ತು ಭೇದಿಃ ಡೆಂಗ್ಯೂ ಸೋಕಿದವರಿಗೆ ಬಾಯಿ ಒಣಗುತ್ತಿರುತ್ತದೆ. ಮಾತುಮಾತಿಗೂ ದಾಹವಾಗುತ್ತಿರುತ್ತದೆ. ಅದೇ ರೀತಿ ಹೊಟ್ಟೆಯಲ್ಲಿ ಸ್ವಲ್ಪ ನೋವು, ವಾಂತಿ ಬರುವಂತೆ, ವಾಂತಿ ಆಗುತ್ತಿರುವಂತೆ, ಭೇದಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ಪಪ್ಪಾಯ ಹಣ್ಣಿನ ಬೀಜವನ್ನು ಆಹಾರದ ಜತೆಗೆ ಸೇವಿಸಬೇಕು
ಪಪ್ಪಾಯ ಬೀಜವನ್ನು ಆಹಾರದ ಜತೆ ತಿನ್ನುವುದರಿಂದ ಅದರಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಗುಣ ಡೆಂಗ್ಯೂ ಜ್ವರವನ್ನು ಕಡಿಮೆ ಮಾಡುತ್ತದೆ. ತಾಜಾ ಪರಂಗಿ ಎಲೆಯನ್ನು ಶುದ್ಧ ಮಾಡಿ ಅದನ್ನು ಹಿಂಡಿ ರಸ ತೆಗೆದು ದಿನಕ್ಕೆ ಎರಡು ಚಮಚ ಸೇವಿಸಬೇಕು
ಡೆಂಗ್ಯೂ ನಿಯಂತ್ರಣ ಬೇವಿನ ಎಲೆಯಿಂದಲೂ ಸಾಧ್ಯ
ಕೊಂಚ ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ನೀರನ್ನು ಕುಡಿಯಿರಿ. ಸಂಶೋಧನೆಗಳ ಮೂಲಕ ಈ ನೀರನ್ನು ನಿಯಮಿತವಾಗಿ ಕುಡಿದ ಡೆಂಘಿ ರೋಗಪೀಡಿತರ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿದ್ದುದು ಕಂಡುಬಂದಿದೆ. ಸಮಪ್ರಮಾಣದಲ್ಲಿ ಇವೆರಡೂ ಎಲೆಗಳ ಹಸಿರು ಭಾಗವನ್ನು ಅರೆದು ಸೇವಿಸುವ ಮೂಲ ಡೆಂಗ್ಯೂ ಜ್ವರವನ್ನು ವಾಸಿ ಮಾಡಬಹುದಾಗಿದೆ.
ಹುಳಿ ಮಿಶ್ರಿತ ಹಣ್ಣುಗಳನ್ನು ತಿನ್ನಿ
ನಿಂಬೆ ಹಣ್ಣು, ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಜ್ವರ ಬಾರದಂತೆ ತಡೆಗಟ್ಟಲು ಈ ಹುಳಿ ಮಿಶ್ರಿತ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ದ್ರಾಕ್ಷಿ ತಿಂದರೆ ಶೀತವಾಗುತ್ತೆಂದೂ, ಔಷಧ ಸಿಂಪಡನೆ ಮಾಡುತ್ತಾರೆ ಎಂದು ಸೇವಿಸುವುದಿಲ್ಲ ಆದರೆ ಕಡ್ಡಾಯವಾಗಿ ಸೇವಿಸಲೇ ಬೇಕಾಗಿದೆ.
ಈಡಿಸ್ ಸೊಳ್ಳೆ ಉತ್ತತ್ತಿಯಾಗದಿರಲು ಏನು ಮಾಡಬೇಕು?
©ಮನೆಯಲ್ಲಿರುವ ಎಲ್ಲ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಬಾವಣಿಯಲ್ಲಿರುವ ತೊಟ್ಟಿಯ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ನೀರನ್ನು ಮತ್ತೆ ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚುವುದು.
©ಮನೆಯ ಸುತ್ತ-ಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟಿನ್, ಟೈರು ಇತ್ಯಾದಿ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು.
®ಘನತ್ಯಾಜ್ಯ ವಸ್ತುಗಳನ್ನು ಬೋರಲಾಗಿಡುವುದು ಅಥವಾ ಶೀಘ್ರವಾಗಿ ಸೂಕ್ತ ವಿಲೇವಾರಿ ಮಾಡಬೇಕು.
®ಏರ್ ಕೂಲರ್‌ಗಳಲ್ಲಿ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಬದಲಾಯಿಸಬೇಕು.
®ಯಾವಾಗಲೂ ಮೈ ತುಂಬಾ ಬಟ್ಟೆ ಧರಿಸಬೇಕು.
®ಹಗಲು ಹೊತ್ತಿನಲ್ಲಿ ನಿದ್ರಿಸುವ/ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು ಮತ್ತು ವಯಸ್ಸಾದವರು ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
®ಡೆಂಗ್ಯೂ ಜ್ವರ ಪೀಡಿತರೂ ಸಹ ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
®ಜ್ವರ ಪೀಡಿತರು ಸಾಕಷ್ಟು ದ್ರವರೂಪದ ಆಹಾರಗಳನ್ನು ಸೇವಿಸುವುದು ಹಾಗೂ ಅಗತ್ಯ ವಿಶ್ರಾಂತಿಯನ್ನು ಪಡೆಯಬೇಕು.
®ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.
®ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿತಾಣ ಸಮೀಕ್ಷೆಗೆಂದು ಮನೆ ಭೇಟಿ ನೀಡುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ನೀಡುವ ಸಲಹೆ – ಸೂಚನೆಗಳನ್ನು ಪಾಲಿಸಬೇಕು.
®ಶಾಲಾ – ಕಾಲೇಜು, ಅಂಗನವಾಡಿ, ಸರ್ಕಾರಿ / ಖಾಸಗಿ ಕಚೇರಿಗಳು, ಬಸ್ ಡಿಪೋ ಇತ್ಯಾದಿಗಳಲ್ಲಿಯೂ – ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ.
ಏನು ಮಾಡಬಾರದು?
®ಡೆಂಗ್ಯೂ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ವೈದ್ಯ ಪದ್ಧತಿಯನ್ನು ಪಾಲಿಸದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಿರಿ.
®ಡೆಂಗ್ಯೂ ಜ್ವರದ ಲಕ್ಷಣಗಳಿದ್ದಲ್ಲಿ ಬ್ರೂಫಿನ್ ಅಥವಾ ಇತರ ನೋವು ನಿವಾರಕಗಳನ್ನು ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಗಳಿವೆ.
 
                         
                         
                         
                         
                         
                         
                         
                         
                         
                        



