Ripponpete | ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್

ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್


ರಿಪ್ಪನ್‌ಪೇಟೆ : ಕಾನೂನು ಎಲ್ಲರಿಗೂ ಒಂದೇ ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕಾಗುವುದೆಂದು ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪದೇಪದೆ ಅಪರಾಧ ಎಸಗುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಅಪರಾಧ ಕೃತ್ಯಗಳು ಸಂಭವಿಸುವ ಮೊದಲೇ ಅಥವಾ ನಂತರದಲ್ಲೂ ತಮಗೆ ಸಿಕ್ಕ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದರು.

ಠಾಣೆಗೆ ಬರುವ ಬಡವರು, ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿದ್ದು ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಠಾಣೆ ಬಂದು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದರು.


ಸಭೆಯಲ್ಲಿದ್ದ ಸಾರ್ವಜನಿಕರು ತೀರ್ಥಹಳ್ಳಿ – ಸಾಗರ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗುತ್ತಿರುವುದರ ಬಗ್ಗೆ ಮತ್ತು ತೀರ್ಥಹಳ್ಳಿ ರಸ್ತೆಯ ಬಾರ್ ಅಂಡ್ ರೆಸ್ಟೋರೆಂಟ್‌ ಬಳಿ ವಾಹನಗಳ ದಟ್ಟಣೆಯಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ತಂದು ಈ ಹಿಂದೆ ತಾವು ಠಾಣಾಧಿಕಾರಿಯಾಗಿದ್ದಾಗ  ನಾಲ್ಕು ರಸ್ತೆಯಲ್ಲಿ ದಿನ ಬಿಟ್ಟು ದಿನ ಒಂದೊಂದು ಕಡೆಯಲ್ಲಿ ವಾಹನ ನಿಲುಗಡೆ ಮಾಡುವಂತೆ ಕಡ್ಡಾಯ ಜಾರಿಗೊಳಿಸಿದ್ದು ಈಗ ಅದು ಇಲ್ಲದಂತಾಗಿ ವಿದ್ಯಾರ್ಥಿಗಳು, ವಯೋವೃದ್ದರು, ಮಹಿಳೆಯರು ರಸ್ತೆ ದಾಟುವುದು ಕಷ್ಟಕರವಾಗಿದೆ.ಇರುವ ಒಂದು ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿಯಿಂದ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಠಾಣಾಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್‌ಐ ಇಂದಿನಿಂದಲೇ ಈ ಮೇಲ್ಕಂಡ ಹಲವು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿ ಬಿಡಾಡಿ ಜಾನುವಾರಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಂಬಂಧಿಸಿದ ಮಾಲೀಕರನ್ನು ಪತ್ತೆ ಮಾಡಿ ಬಂದೋಬಸ್ತ್ ಮಾಡುವಂತೆ ತಿಳುವಳಿಕೆ ನೀಡಿ ನಂತರದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾ.ಪಂ ಸದಸ್ಯರಾದ ಸುಂದರೇಶ್, ಆರ್.ವಿ.ನಿರೂಪ್ ಕುಮಾರ್, ಆಶೀಫ್ ಭಾಷಾ, ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ, ಎಂ.ಸುರೇಶ್‌ಸಿಂಗ್, ಕುಕ್ಕಳಲೇ ಈಶ್ವರಪ್ಪ, ಮಹಮ್ಮದ್ ರಫ಼ಿ,ನಾಸೀರ್ ,ಶೇಖಬ್ಬ , ಕ್ರಿಶ್ಚಿಯನ್ ಸಮುದಾಯದ ಮುಖಂಡ ವರ್ಗೀಶ್, ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಹಾಗೂ ಎಎಸ್‌ಐ ಮಂಜಪ್ಪ, ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *