ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ 23 ವರ್ಷದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ
ಶಿವಮೊಗ್ಗ : 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕಾರಿಪುರ ತಾಲ್ಲೂಕಿನ ನಿವಾಸಿ 23 ವರ್ಷದ ಯುವಕನಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ 20 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ ₹50 ಸಾವಿರದ ದಂಡ ವಿಧಿಸಿದೆ.
2023ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿತ್ತು. ಈ ಬಗ್ಗೆ ನೊಂದ ಬಾಲಕಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಿನ ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಎಸ್.ಮದರಖಂಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಲತಾ, ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ದಂಡ ಕಟ್ಟಲು ವಿಫಲನಾದಲ್ಲಿ ನಾಲ್ಕು ತಿಂಗಳು ಹೆಚ್ಚುವರಿಯಾಗಿ ಸಾದಾ ಸೆರೆವಾಸ ಶಿಕ್ಷೆ, ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ ₹45,000 ಹಾಗೂ ಸರ್ಕಾರದ ವತಿಯಿಂದ ಆಕೆಗೆ ₹7 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಕೀಲ ಎಸ್.ಹರಿಪ್ರಸಾದ್ ವಾದ ಮಂಡಿಸಿದ್ದಾರೆ.