ಜವಾಬ್ದಾರಿಯಿಂದ ಕೆಲಸ ಮಾಡಿ ಇಲ್ಲದಿದ್ದರೇ ಜಾಗ ಖಾಲಿ ಮಾಡಿ – ಅಧಿಕಾರಿಗಳ ವಿರುದ್ದ ಶಾಸಕ ಬೇಳೂರು ಗರಂ..!! | GKB
ಹೊಸನಗರ : ಹೇಳಿದ ಕೆಲಸ ಮಾಡಿ ಇಲ್ಲ, ಜಾಗ ಖಾಲಿ ಮಾಡಿ. ಮಳೆಗಾಲದಲ್ಲಿ ಇಲ್ಲಿ ಸಾಲು ಸಾಲು ವಿಕೋಪಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲೂ ಸರಿಯಾಗಿ ಕೆಲಸ ಮಾಡದಿದ್ದರೆ ಹೇಗೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಮಳೆಗಾಲದ ದಿನಗಳಲ್ಲಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಸಕಾಲಕ್ಕೆ ಜನರಿಗೆ ಸ್ಪಂದಿಸಬೇಕು ಎಂದು ಹತ್ತಾರು ಬಾರಿ ತಿಳಿಸಲಾಗಿದೆ. ಆದರೂ ಕೆಲ ಅಧಿಕಾರಿಗಳು ದೂರದ ಶಿವಮೊಗ್ಗದಲ್ಲಿ ವಾಸವಿದ್ದಾರೆ. ಅವರು ಇಲ್ಲಿಗೆ ಬಂದು ಜನರಿಗೆ ಸಕಾಲದಲ್ಲಿ ಲಭ್ಯವಾಗಲು ಹೇಗೆ ಸಾಧ್ಯ. ಇದು ಕೊನೆಯ ಸೂಚನೆಯಾಗಿದ್ದು, ಎಲ್ಲರೂ ಕೇಂದ್ರ ಸ್ಥಾನದಲ್ಲಿಯೇ ಇರಬೇಕು ಎಂದು ತಾಕೀತು ಮಾಡಿದರು.
‘ಸರಿಯಾಗಿ ಕರ್ತವ್ಯ ನಿರ್ವಹಿಸದವರಿಗೆ ನೋಟಿಸ್ ನೀಡಿ ಅಮಾನತು ಮಾಡಿ. ಮುಂದೆ ಏನಾಗುತ್ತದೋ ನಾನು ನೋಡಿಕೊಳ್ಳುವೆ’ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ಅವರಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ಆಡಳಿತ ಕಚೇರಿ ನೂತನ ಕಟ್ಟಡ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಿದೆ. ಅಭ್ಯವಿರುವ ಹಣದಲ್ಲಿ ಸುಂದರ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಹಣ ತರಬಹುದಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ರಶ್ಮಿ ಹಾಲೇಶ್, ಇ.ಒ ನರೇಂದ್ರ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ್, ಮಂಜು ಸಣ್ಣಕ್ಕಿ ಇದ್ದರು.