ಕಂದಕಕ್ಕೆ ಉರುಳಿದ KSRTC ಬಸ್ – ತಪ್ಪಿದ ಭಾರಿ ಅನಾಹುತ
ಕೆ ಎಸ್ ಆರ್ ಟಿಸಿ ಬಸ್ ಕಂದಕಕ್ಕೆ ಉರುಳಿಬಿದ್ದು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಗೋಡು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಬೆಂಗಳೂರಿನಿಂದ ಭಟ್ಕಳಕ್ಕೆ ಪ್ರಯಾಣಿಸುತ್ತಿದ್ದ ವಾಯುವ್ಯ ಸಾರಿಗೆ ಬಸ್ ಹೊಸನಗರದಿಂದ ಮಧ್ಯಾಹ್ನ 1:30ಕ್ಕೆ ಹೊರಟಿದ್ದು ಸುಮಾರು 3 ಗಂಟೆಯ ಸಮಯದಲ್ಲಿ ಸಮಗೋಡು ಬಳಿ ತಿರುವಿನಲ್ಲಿ ಎದುರು ಭಾಗದಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡುವ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಬಸ್ನಲ್ಲಿ ಮಕ್ಕಳು, ವಿದ್ಯಾರ್ಥಿಗಳು ಸೇರಿ ಸುಮಾರು 60 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು ಸುಮಾರು 40 ಅಡಿ ಆಳದ ಕಂದಕಕ್ಕೆ ಬಸ್ ಉರುಳಿದ್ದು ಮರವೊಂದರ ಸಹಾಯದಿಂದ ತಲೆ ಕೆಳಗಾಗಿ ಬಿದ್ದಿದೆ. ಮರ ಇಲ್ಲದಿದ್ದರೆ ಸುಮಾರು 100 ಅಡಿ ಆಳದ ಹೊಳೆಗೆ ಬಸ್ ಬೀಳುತ್ತಿತ್ತು ಎಂದು ಹೇಳಲಾಗಿದೆ.
ಬಸ್ ಕಂದಕಕ್ಕೆ ಬೀಳುತ್ತಿದ್ದಂತೆ ಗ್ರಾಮದ ಸಾರ್ವಜನಿಕರು ತಕ್ಷಣ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಬಸ್ನಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ.