ವಿದೇಶದಲ್ಲಿದ್ದುಕೊಂಡು 100K ಇನ್‌ಸ್ಟಾಗ್ರಾಂ ಫಾಲೋವರ್ಸ್ ಗಳಿಸಿದ ಪ್ರಥಮ ಕನ್ನಡಿಗ: ಮಲೆನಾಡಿನ ಕಾರ್ತಿಕ್ ವಿಶಿಷ್ಟ ಸಾಧನೆ | Karthik, a young man from Keregodu near Ripponpet in Shivamogga district, achieves a remarkable milestone of 100K Instagram followers by creating unique Kannada content while working as a driver in Saudi Arabia. Read his inspiring journey of hard work and creativity.
ರಿಪ್ಪನ್‌ಪೇಟೆ : ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸುವುದು ಇಂದಿನ ಡಿಜಿಟಲ್ ಯುಗದಲ್ಲಿ ದೊಡ್ಡ ಮೈಲಿಗಲ್ಲು. ಅದು ಕೇವಲ ಸಂಖ್ಯೆಯಲ್ಲ, ಒಬ್ಬ ಕಂಟೆಂಟ್ ಕ್ರಿಯೇಟರ್‌ನ ಸೃಜನಶೀಲತೆ, ನಿರಂತರ ಪರಿಶ್ರಮ ಹಾಗೂ ಪ್ರೇಕ್ಷಕರು ಆತನ ಮೇಲಿಟ್ಟಿರುವ ನಂಬಿಕೆಯ ಪ್ರತಿಬಿಂಬ. ಇಂತಹದೊಂದು ಅಪರೂಪದ ಮತ್ತು ಹೆಮ್ಮೆಯ ಸಾಧನೆಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೆರೆಗೋಡು ಗ್ರಾಮದ ಯುವಕ ಕಾರ್ತಿಕ್ ಮಾಡಿದ್ದಾರೆ.
ದೂರದ ಸೌದಿ ಅರೇಬಿಯಾದಲ್ಲಿ ಚಾಲಕ ವೃತ್ತಿ ಮಾಡುತ್ತಲೇ, ತಮ್ಮ ಬಿಡುವಿನ ವೇಳೆಯಲ್ಲಿ ವಿಭಿನ್ನ ಶೈಲಿಯ ಕನ್ನಡ ಕಂಟೆಂಟ್‌ಗಳನ್ನು ರಚಿಸುವ ಮೂಲಕ ಕಾರ್ತಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 100K (ಒಂದು ಲಕ್ಷ) ಫಾಲೋವರ್ಸ್ ಗಳಿಸಿದ್ದಾರೆ. ವಿದೇಶದ ನೆಲದಲ್ಲಿದ್ದುಕೊಂಡು ಕನ್ನಡ ಭಾಷೆಯಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವ ಮೂಲಕ ಈ ಮೈಲಿಗಲ್ಲು ತಲುಪಿದ ಪ್ರಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಮಲೆನಾಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಬದುಕಿನ ತಿರುವು ಮತ್ತು ಸವಾಲಿನ ಹಾದಿ:
ಜಂಬಳ್ಳಿ ಸಮೀಪದ ಕೆರೆಗೋಡು ಗ್ರಾಮದ ಪ್ರೇಮ್ ಕುಮಾರ್ ಹಾಗೂ ಶೋಭಾ ದಂಪತಿಯ ಪುತ್ರನಾದ ಕಾರ್ತಿಕ್, ಬಿಕಾಂ ಪದವೀಧರರು. ಈ ಹಿಂದೆ ರಿಪ್ಪನ್‌ಪೇಟೆಯಲ್ಲಿ ಬಟ್ಟೆ ಅಂಗಡಿ ನಡೆಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಸಾಗರ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ವ್ಯಾಪಾರಕ್ಕೆ ಹಿನ್ನಡೆಯಾಗಿ ಅಂಗಡಿ ಮುಚ್ಚುವ ಪರಿಸ್ಥಿತಿ ಎದುರಾಯಿತು. ಎದೆಗುಂದದ ಕಾರ್ತಿಕ್, “ಯಾವ ಕೆಲಸವಾದರೇನು, ದುಡಿದು ಬದುಕಬೇಕು” ಎಂಬ ಛಲದೊಂದಿಗೆ ಸ್ನೇಹಿತನ ಸಹಕಾರದಿಂದ ಕಳೆದ ಮೂರು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಿ ಚಾಲಕ ವೃತ್ತಿಯನ್ನು ಆಯ್ದುಕೊಂಡರು.
ಕಠಿಣ ಕಾನೂನಿನ ನಡುವೆ ಅರಳಿದ ಪ್ರತಿಭೆ:
ಸೌದಿ ಅರೇಬಿಯಾ ಅತ್ಯಂತ ಕಟ್ಟುನಿಟ್ಟಿನ ಕಾನೂನುಗಳನ್ನು ಹೊಂದಿರುವ ದೇಶ. ಅಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕವಾಗಿ ವಿಡಿಯೋ ಚಿತ್ರೀಕರಣ ಮಾಡುವುದು ಶಿಕ್ಷಾರ್ಹ ಅಪರಾಧ. ಆರಂಭದ ದಿನಗಳಲ್ಲಿ ಕಾರ್ತಿಕ್ ವಿಡಿಯೋ ಮಾಡುವುದಕ್ಕೆ ಅವರ ಅರೇಬಿಯನ್ ಮಾಲೀಕರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಕಾರ್ತಿಕ್ ಅವರ ಸೃಜನಶೀಲತೆ, ಶಿಸ್ತು ಮತ್ತು ವಿಭಿನ್ನ ಶೈಲಿಯ ನಿರೂಪಣೆಯನ್ನು ಕಂಡ ಬಳಿಕ ಸ್ವತಃ ಮಾಲೀಕರೇ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಲಾರಂಭಿಸಿದರು.
ಕಾರ್ತಿಕ್ ಅವರ ವಿಡಿಯೋಗಳು ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆಯುತ್ತಿವೆ. ಕೇವಲ ಮನರಂಜನೆ ಮಾತ್ರವಲ್ಲದೆ, ವಿಶಿಷ್ಟ ಶೈಲಿ, ನಿರಂತರ ಪರಿಶ್ರಮ ಹಾಗೂ ಪ್ರೇಕ್ಷಕರಿಗೆ ಹತ್ತಿರವಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೇ ಅವರ ಈ ಯಶಸ್ಸಿಗೆ ಮುಖ್ಯ ಕಾರಣವಾಗಿದೆ. ಕಷ್ಟದ ಹಾದಿಯನ್ನು ಮೆಟ್ಟಿ ನಿಂತು ವಿದೇಶದಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿರುವ ಕಾರ್ತಿಕ್ ಅವರ ಈ ಸಾಧನೆ ಇತರ ಯುವಕರಿಗೆ ಸ್ಫೂರ್ತಿಯಾಗಿದೆ.
100K ಫಾಲೋವರ್ಸ್ ಗಡಿ ದಾಟಿರುವ ಕಾರ್ತಿಕ್ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಪೋಸ್ಟ್ ಮ್ಯಾನ್ ನ್ಯೂಸ್ ಹೃತ್ಪೂರ್ವಕವಾಗಿ ಹಾರೈಸುತ್ತದೆ.
