ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ವರ್ಗಾವಣೆ: ನೂತನ ಎಸಿ ಆಗಿ ಜಿ.ಹೆಚ್. ಸತ್ಯನಾರಾಯಣ ನೇಮಕ | K.A.S. officer Veeresh Kumar transferred from Sagar Sub-Division. G.H. Satyanarayana appointed as the new Assistant Commissioner of Sagar, Shivamogga district.
ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗಾಧಿಕಾರಿಯಾಗಿ (AC) ಕಾರ್ಯನಿರ್ವಹಿಸುತ್ತಿದ್ದ ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ ವೀರೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಶುಕ್ರವಾರ (ನ.13) ಆದೇಶ ಹೊರಡಿಸಿದೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ಆದರೆ, ವರ್ಗಾವಣೆಗೊಂಡಿರುವ ವೀರೇಶ್ ಕುಮಾರ್ ಅವರಿಗೆ ಸದ್ಯಕ್ಕೆ ಯಾವುದೇ ಸ್ಥಳ ನಿಯುಕ್ತಿಗೊಳಿಸಿಲ್ಲ. ಮುಂದಿನ ಸ್ಥಳ ನಿಯುಕ್ತಿಯಾಗುವವರೆಗೆ ಸ್ಥಳ ನಿರೀಕ್ಷಣೆಯಲ್ಲಿರುವ ಅವರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ (ಸಿಆಸುಇ) ಕಾರ್ಯವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ನೂತನ ಉಪವಿಭಾಗಾಧಿಕಾರಿಯಾಗಿ ಜಿ.ಹೆಚ್. ಸತ್ಯನಾರಾಯಣ ನೇಮಕ
ವೀರೇಶ್ ಕುಮಾರ್ ಅವರ ವರ್ಗಾವಣೆಯಿಂದ ತೆರವಾದ ಸಾಗರ ಉಪವಿಭಾಗಾಧಿಕಾರಿ ಹುದ್ದೆಗೆ ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ ಜಿ.ಹೆಚ್. ಸತ್ಯನಾರಾಯಣ ಅವರನ್ನು ನೇಮಕ ಮಾಡಲಾಗಿದೆ.
ಇವರು ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-07ರಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಹೆಚ್. ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ನೂತನವಾಗಿ ನೇಮಕಗೊಂಡಿರುವ ಅಧಿಕಾರಿ ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ಸಿ.ಟಿ.ಸಿ. (CTC) ಪ್ರತಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

