ಗಾಂಜಾ ಮಾರಾಟ ಆರೋಪ: ಐವರ ಬಂಧನ, ₹61,500 ಮೌಲ್ಯದ ಗಾಂಜಾ ವಶಕ್ಕೆ! | Five arrested for alleged ganja sales near Anupinakatthe in Shivamogga. Tunganagar police seized 1.23 kg of ganja valued at ₹61,500.
ಶಿವಮೊಗ್ಗ: ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹61,500 ಮೌಲ್ಯದ 1 ಕೆಜಿ 230 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ವಸೀಂ ಅಕ್ರಮ್ (24), ನದೀಮ್ (21), ನಾಸೀರ್ ಶೇಖ್ (20), ಹರ್ಷದ್ ವುಲ್ಲಾ (21) ಹಾಗೂ ಶಾಹೀದ್ ಖಾನ್ (26) ಎಂದು ಗುರುತಿಸಲಾಗಿದೆ.
ಶಿವಮೊಗ್ಗ–ಹಾಳೂರು ಅನುಪಿನಕಟ್ಟೆ ಮುಖ್ಯರಸ್ತೆಯ ತುಂಗಾ ಮೇಲ್ದಂಡೆ ಚಾನಲ್ ಸಮೀಪ ಗಾಂಜಾ ಮಾರಾಟ ನಡೆಯುತ್ತಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ಎಂ. ರಘುವೀರ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು.
ಈ ವೇಳೆ ಗಾಂಜಾ ಮಾರಾಟದಲ್ಲಿ ತೊಡಗಿರುವ ಆರೋಪದ ಮೇಲೆ ಐವರನ್ನು ಬಂಧಿಸಿ, ಅವರ ಬಳಿಯಿದ್ದ 1 ಕೆಜಿ 230 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಗಾಂಜಾದ ಮೌಲ್ಯ ₹61,500 ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (NDPS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
