ತೀರ್ಥಹಳ್ಳಿ:  ಪಟ್ಟಣದ ಎಡೆಹಳ್ಳಿ ಕೆರೆ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಡೆಹಳ್ಳಿ ಕೆರೆ ಸರ್ಕಲ್ ಹತ್ತಿರ ಯಾರೋ ಎರಡು ಜನ ವ್ಯಕ್ತಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ಗಜಾನನ ವಾಮನ ಸುತಾರ ರವರ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ
ಗಾಂಜಾ ಮಾರಾಟ ಮಾಡುತಿದ್ದ ಸಂಜಯ್  ಮತ್ತು  ಸುದೀಪ್. ಪಿ. ಎಸ್  ಬಂಧಿಸಲಾಗಿದ್ದು ಆರೋಪಿತರಿಂದ ಅಂದಾಜು ಮೌಲ್ಯ 9,000/- ರೂಗಳ 190 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡು  ಆರೋಪಿತರ ವಿರುದ್ದ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ತೀರ್ಥಹಳ್ಳಿ ಪಿಎಸ್ ಐ ಗಾದಿಲಿಂಗಪ್ಪ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಬಳಿ ಇತ್ತೀಚಿಗೆ ತೋಟದಲ್ಲಿ ಗಾಂಜಾ ಗಿಡ ಬೆಳೆದ ಇಬ್ಬರನ್ನು ಬಂಧನ ಮಾಡಲಾಗಿತ್ತು. ಈಗ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರನ್ನು ಬಂಧಿಸುವ ಮೂಲಕ ಗಾಂಜಾ ವ್ಯಸನಿಗಳ ವಿರುದ್ದ ತೀರ್ಥಹಳ್ಳಿ ಪೊಲೀಸ್ ಖಡಕ್ ಕ್ರಮ ಜರುಗಿಸುತ್ತಿದೆ.
ತೀರ್ಥಹಳ್ಳಿ ತಾಲೂಕಿನ ಹಲವು ಭಾಗಗಳಲ್ಲಿ ಅನೈತಿಕ ಗಾಂಜಾ ಚಟುವಟಿಕೆಗಳು ನಡೆಯುತ್ತಿದ್ದು ಯುವಕರು, ಕೆಲವು ವಿದ್ಯಾರ್ಥಿಗಳು ಗಾಂಜಾ ಅಮಲಲ್ಲಿ ತೇಲಾಡುತ್ತಿರುವ ದೃಶ್ಯ ಮಾಮೂಲಾಗಿದೆ.  ಹೋಟೆಲ್ ಬಾರ್ ರೆಸ್ಟೋರೆಂಟ್ ಸೇರಿ ಹಲವು ಅಡ್ಡೆಗಳಲ್ಲಿ ಗಾಂಜಾ ಗಮ್ಮತ್ತು ನಡೆಯುತ್ತಿರಬಹುದು ಎಂದು ಹೇಳಲಾಗುತ್ತಿದ್ದು ಇದೀಗ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದು ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಪೊಲೀಸರು ಖಡಕ್ ಕ್ರಮ ಜರುಗಿಸುತ್ತಿದ್ದಾರೆ.
		 
                         
                         
                         
                         
                         
                         
                         
                         
                         
                        
