ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವ ಸಂಭ್ರಮದಿಂದ ಸಂಪನ್ನ | The historic Ammanaghatta Jenu Kallamma Devi Jatra Mahotsava was celebrated with devotion near Ripponpete, featuring special poojas, traditional offerings, and prayers for prosperity and good health.
ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ವಿಜೃಂಭಣೆಯಿಂದ ನೆರವೇರಿತು.
ಪಿತೃಪಕ್ಷದ ಸಂದರ್ಭದಲ್ಲಿ ಆಚರಿಸಲಾಗುವ ಈ ಜಾತ್ರೆಯು ಮಂಗಳವಾರ ಮತ್ತು ಶುಕ್ರವಾರದಂದು ನಡೆಯುವುದು ವಿಶೇಷ. ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಬೆಳೆಗಳ ರಕ್ಷಣೆಗಾಗಿ ದೇವಿಗೆ ವಿಶೇಷ ಪ್ರಾರ್ಥನೆ
ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರೆಯಲ್ಲಿ ಭಕ್ತರು ತಾವು ಬೆಳೆದ ಶುಂಠಿ ಹಾಗೂ ಅಡಿಕೆ ಬೆಳೆಗಳಿಗೆ ರೋಗರುಜಿನಗಳು ಬಾಧಿಸದಂತೆ ದೇವಿಯಲ್ಲಿ ಪ್ರಾರ್ಥಿಸಿ, ಹರಕೆ ಸಲ್ಲಿಸುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.
ಇನ್ನು ಕೆಲವು ಭಕ್ತರು ಮೊಸರನ್ನವನ್ನು (ಬುತ್ತಿ) ತಯಾರಿಸಿಕೊಂಡು ದೇವಸ್ಥಾನಕ್ಕೆ ತಂದು ದೇವಿಗೆ ನೈವೇದ್ಯ ಅರ್ಪಿಸುತ್ತಾರೆ. ಬಳಿಕ ನೈವೇದ್ಯಕ್ಕೆ ಬಳಸಿದ ಬೆಣ್ಣೆಯನ್ನು ದೇವಿಯ ಬಂಡೆಗೆ ಎಸೆಯುವ ಸಂಪ್ರದಾಯವೂ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ವಿಶೇಷ ಪೂಜೆ, ಮಹಾಮಂಗಳಾರತಿಱ್
ಜಾತ್ರೆಯ ಅಂಗವಾಗಿ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯಿಸ್ ಅವರ ನೇತೃತ್ವದಲ್ಲಿ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಮಹಾಮಂಗಳಾರತಿ ನಡೆಸಿ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಬಳೆ ಹಾಗೂ ರವಿಕೆಯನ್ನು ನೀಡಿ ಉಡಿ ತುಂಬುವ ಸಂಪ್ರದಾಯವನ್ನು ನೆರವೇರಿಸಲಾಯಿತು.
ಇಷ್ಟಾರ್ಥ ಸಿದ್ಧಿಗಾಗಿ ಭಕ್ತರಿಂದ ಹರಕೆ
ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ಈಡೇರಿಸುವ ದೇವಿ ಎಂಬ ನಂಬಿಕೆ ಅಮ್ಮನಘಟ್ಟ ಜೇನುಕಲ್ಲಮ್ಮ ಕ್ಷೇತ್ರದ ಮೇಲಿದ್ದು, ನವದಂಪತಿಗಳು, ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುವವರು ಹಾಗೂ ಚರ್ಮವ್ಯಾಧಿ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಸಂಕಲ್ಪ ಈಡೇರಿದ ಬಳಿಕ ಮುಡುಪು ಹಾಗೂ ಕಾಣಿಕೆಗಳನ್ನು ಅರ್ಪಿಸುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ಈ ಕ್ಷೇತ್ರಕ್ಕೆ ಆಗಮಿಸಿ ಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ಪ್ರಾರ್ಥಿಸಿದರೆ ದೇವಿಯ ಕೃಪೆಯಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯಿಸ್ ಹೇಳಿದರು.
ಜಾತ್ರಾಮಹೋತ್ಸವದಲ್ಲಿ ದೇವಸ್ಥಾನದ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್, ಎಂ.ಪಿ. ಸುರೇಶ್, ಗುರುರಾಜ ಭಟ್, ಕೋಡೂರು ಗ್ರಾಮ ಪಂಚಾಯಿತಿ ಸದಸ್ಯ ಜಯಪ್ರಕಾಶ್, ಸುಧಾಕರ್, ಕಾರಕ್ಕಿ ಯೋಗೇಂದ್ರ, ಉಮೇಶ್ ಕಲಗೋಡು ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
