ಕೋಡೂರು ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಕರು ಸಾವು – ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹ | A two-year-old calf was killed in a leopard attack at Hindlemanе village in Koduru Gram Panchayat limits of Hosanagara taluk, Shivamogga. Villagers have urged the Forest Department to capture the leopard.
ಹೊಸನಗರ: ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ವರ್ಷದ ಕರು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಹಿಂಡ್ಲೇಮನೆ ಗ್ರಾಮದ ಶ್ರೀಮತಿ ಎಂಬುವರಿಗೆ ಸೇರಿದ ಕರುವನ್ನು ಎಂದಿನಂತೆ ಮೇಯಲು ಬಿಡಲಾಗಿತ್ತು. ಈ ವೇಳೆ ಚಿರತೆ ದಾಳಿ ನಡೆಸಿದ್ದು, ಕರುವಿನ ಗಂಟಲಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ದಾಳಿಯಿಂದ ತಪ್ಪಿಸಿಕೊಂಡ ಕರು ಮನೆಗೆ ಮರಳಿದ್ದರೂ, ತೀವ್ರ ರಕ್ತಸ್ರಾವದಿಂದ ಕೆಲವೇ ಸಮಯದಲ್ಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ಹಿಂಡ್ಲೆಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸಂಚಾರ ಹೆಚ್ಚಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದೀಗ ಜಾನುವಾರು ಮೇಲೆ ದಾಳಿ ನಡೆದಿರುವುದರಿಂದ ಜನರು ಹಾಗೂ ಜಾನುವಾರುಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ.
ಚಿರತೆ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಚಿರತೆಯ ಚಲನವಲನವನ್ನು ಪತ್ತೆಹಚ್ಚಿ, ಅಗತ್ಯ ಕ್ರಮ ಕೈಗೊಂಡು ಬೋನು ಇರಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುವಾಗ ಹಾಗೂ ಮನೆಯ ಸುತ್ತಮುತ್ತ ಸಂಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಗ್ರಾಮಸ್ಥರು ಪರಸ್ಪರ ಜಾಗೃತಿ ಮೂಡಿಸುತ್ತಿದ್ದಾರೆ.
