ಅತಿ ವೇಗದ ಬೈಕ್ ಚಾಲನೆಯಿಂದ ಪಾದಚಾರಿ ಸಾವು : ಬೈಕ್ ಸವಾರನಿಗೆ 1 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ
Bhadravati court sentences bike rider Nikhil to 1 year 1 month 15 days in jail and imposes ₹11,000 fine for causing pedestrian Bhojaraj’s death in a 2021 road accident.
ಭದ್ರಾವತಿ: ಅತಿ ವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿ ಪಾದಚಾರಿಯೊಬ್ಬರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬೈಕ್ ಸವಾರನಿಗೆ ಭದ್ರಾವತಿಯ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ನ್ಯಾಯಾಧೀಶೆ ನಾಸಿರ ಭಾನು ಅವರು ಸೆಪ್ಟೆಂಬರ್ 17ರಂದು ತೀರ್ಪು ಪ್ರಕಟಿಸಿದ್ದು, ಆರೋಪಿ ನಿಖಿಲ್‌ಗೆ ಒಟ್ಟು 1 ವರ್ಷ 1 ತಿಂಗಳು 15 ದಿನಗಳ ಜೈಲು ಶಿಕ್ಷೆ ಹಾಗೂ ₹11,000 ದಂಡ ವಿಧಿಸಿದ್ದಾರೆ.
ಅಪಘಾತದ ಹಿನ್ನೆಲೆ :
2021ರ ಡಿಸೆಂಬರ್ 27ರಂದು ಆನವೇರಿ ಕೈಮರ ರಸ್ತೆಯಲ್ಲಿ ಭೋಜರಾಜ್ ಎಂಬವರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಆರೋಪಿ ನಿಖಿಲ್ ಬಜಾಜ್ ಪಲ್ಸರ್ ಬೈಕ್ ಅನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭೋಜರಾಜ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.
ಡಿಕ್ಕಿಯ ಪರಿಣಾಮ ಗಂಭೀರವಾಗಿ ಗಾಯಗೊಂಡ ಭೋಜರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಮೃತರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ ಅವರು ತನಿಖೆ ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ತಿಪ್ಪೇಶ್ ರಾವ್ ಅವರು ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳು ಹಾಗೂ ಪ್ರಕರಣದ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿ ತಪ್ಪಿತಸ್ಥನೆಂದು ಪರಿಗಣಿಸಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
