ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ

Thousands of devotees participated in Sri Guru Raghavendra Swamy’s 355th Aradhana Mahotsava held at Ripponpet, Haratallu and Garthekere in Shivamogga district.

ರಿಪ್ಪನ್‌ಪೇಟೆ: ಮಲೆನಾಡಿನ ವಿವಿಧೆಡೆ ಶ್ರೀ ಗುರು ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಿಂದ ನಡೆಯಿತು. ರಿಪ್ಪನ್‌ಪೇಟೆ ಪಟ್ಟಣದ ಕಿರು ಮಂತ್ರಾಲಯ, ಜಿ.ಎಸ್.ಬಿ. ಸಮಾಜ, ಸಮೀಪದ ಗರ್ತಿಕೆರೆ ಹಾಗೂ ಹರತಾಳು ಶ್ರೀ ರಾಘವೇಂದ್ರಸ್ವಾಮಿ ಮಠಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಗುರುರಾಯರ ದರ್ಶನ ಪಡೆದು ಪುಣ್ಯಾರಾಧನೆಯಲ್ಲಿ ಭಾಗವಹಿಸಿದರು.

ರಿಪ್ಪನ್‌ಪೇಟೆ ಪಟ್ಟಣದ ಪ್ರಸಿದ್ಧ ಕಿರು ಮಂತ್ರಾಲಯದಲ್ಲಿ ಪ್ರಾತಃಕಾಲದಿಂದಲೇ ವಿಶೇಷ ಪೂಜೆ, ಪುಣ್ಯಾರಾಧನೆ, ಪಂಚಾಮೃತ ಮಹಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮವೂ ಜರುಗಿತು.

ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಾಯರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ ತೀರ್ಥ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು. ದಿನವಿಡೀ ಭಕ್ತರ ದಟ್ಟಣೆ ಕಂಡುಬಂದಿದ್ದು, ಕಿರು ಮಂತ್ರಾಲಯ ಭಕ್ತಿಸಾಗರದಿಂದ ತುಂಬಿತ್ತು.

ಪಟ್ಟಣದ ಜಿ.ಎಸ್.ಬಿ. ಸಮಾಜದಲ್ಲಿಯೂ ಶ್ರೀ ಗುರು ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು. ವಿಶೇಷ ಪೂಜೆ, ಗುರುಸ್ತೋತ್ರ ಪಾರಾಯಣ, ಮಂಗಳಾರತಿ ಹಾಗೂ ಭಜನಾ ಕಾರ್ಯಕ್ರಮಗಳು ನೆರವೇರಿದವು. ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಸಮೀಪದ ಗರ್ತಿಕೆರೆ ಶ್ರೀ ರಾಘವೇಂದ್ರ ಮಠದಲ್ಲಿ 355ನೇ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ, ಪುಣ್ಯಾರಾಧನೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಿತು. ಗರ್ತಿಕೆರೆ, ಹೆದ್ದಾರಿಪುರ, ಹುಂಚ, ಸೊನಲೆ, ಕೋಣಂದೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅದೇ ರೀತಿ ಹರತಾಳು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿಯೂ ಆರಾಧನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುರಾಯರ ಆಶೀರ್ವಾದ ಪಡೆದರು.

ಮಲೆನಾಡಿನಾದ್ಯಂತ ರಾಯರ 355ನೇ ಆರಾಧನೆಯ ಅಂಗವಾಗಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ವಿವಿಧ ಮಠಗಳಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಮನಸೆಳೆದವು.

About The Author