ರಿಪ್ಪನ್‌ಪೇಟೆ : ಪಟ್ಟಣದ ಕನ್ನಡಪರ ಹೋರಾಟಗಾರ ವಿನಾಯಕ್ ಶೆಟ್ಟಿ ಇನ್ನು ನೆನಪು ಮಾತ್ರ.ಇಂದು ಮುಂಜಾನೆ ಹೃದಯಾಘಾತಕ್ಕೊಳಗಾಗಿ ವಿನಾಯಕ್ ಶೆಟ್ಟಿ ಕೊನೆಯುಸಿರೆಳೆದ ಸುದ್ದಿ ಅವರ ಅಪಾರ ಸ್ನೇಹ ಬಳಗದ ಅಘಾತಕ್ಕೆ ಕಾರಣವಾಗಿತ್ತು.
ಸಾಗರ ರಸ್ತೆಯ ಭಗತ್ ಸಿಂಗ್ ಕಾಲೋನಿಯಲ್ಲಿರುವ ಮೃತರ ನಿವಾಸದಲ್ಲಿ ಇಂದು ಮುಂಜಾನೆಯಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ವಿನಾಯಕ ಶೆಟ್ಟಿ ಲೀನರಾಗಿದ್ದಾರೆ.
ವಿನಾಯಕ್ ಶೆಟ್ಟಿ ಆಡಿ, ಬೆಳೆದ ಮನೆಯ ಮುಂಭಾಗದಲ್ಲಿ ಸಹೋದರ ವಿಕ್ರಮ್ ಶೆಟ್ಟಿ ಅಂತಿಮ ವಿಧಿ-ವಿಧಾನ ನೆರವೇರಿಸಿದರು ಈ ಸಂಧರ್ಭದಲ್ಲಿ ಅವರ ಸ್ನೇಹಿತರ ಬಳಗ ಹಿಂದುತ್ವದ ಕಿಡಿ ವಿನಾಯಕ್ ಶೆಟ್ಟಿ ಅಮರ್ ಹೇ,ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯೊಂದಿಗೆ ಪಾರ್ಥೀವ ಶರೀರದ ಮೇಲೆ ಕೇಸರಿ ವಸ್ತ್ರ ಹಾಕಿ ಗೌರವ ಸಲ್ಲಿಸಿದರು. ಈ ಸನ್ನಿವೇಶ ನೆರೆದಿದ್ದವರ ಕಣ್ಣಾಳಿಗಳನ್ನು ತೇವಗೊಳಿಸಿತ್ತು.
ಆ ನಂತರ ಪಾರ್ಥೀವ ಶರೀರದ ಮೆರವಣಿಗೆ ಬಾಳೂರು ಗ್ರಾಮದ ಹಿಂದೂ ರುಧ್ರಭೂಮಿಯವರೆಗೂ ಸಾಗಿತು.ಈ ಸಂಧರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತು.
ಬಂಟರ ಸಂಪ್ರದಾಯದಂತೆ ಅಂತ್ಯಸಂಸ್ಕಾರ:
ಸಂಜೆ 7 ಗಂಟೆಗೆ ಪಾರ್ಥಿವ ಶರೀರ ಬಾಳೂರು ಗ್ರಾಮದ ಹಿಂದೂ ರುಧ್ರಭೂಮಿಗೆ ತಲುಪಿತು.ಬಂಟರ ಸಂಪ್ರದಾಯಂತೆ ಸಹೋದರ ವಿಕ್ರಮ್ ಶೆಟ್ಟಿ ವಿಧಿ-ವಿಧಾನ ನೆರವೇರಿಸಿ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ವಿನಾಯಕ್ ಶೆಟ್ಟಿ ಪಂಚಭೂತಗಳಲ್ಲಿ ಲೀನರಾದರು.