Headlines

ಈಡಿಗ ಸಮಾಜದ ಶಕ್ತಿ ಪ್ರದರ್ಶನಕ್ಕೆ ಎಲ್ಲಾರೂ ಸಜ್ಜಾಗಬೇಕು: ಶಾಸಕ ಬೇಳೂರು ಗೋಪಾಲಕೃಷ್ಣ ಕರೆ|beluru

ಈಡಿಗ ಸಮಾಜದ ಶಕ್ತಿ ಪ್ರದರ್ಶನಕ್ಕೆ ಸಜ್ಜು: ಶಾಸಕ ಬೇಳೂರು ಗೋಪಾಲಕೃಷ್ಣ ಕರೆ

ಸಾಗರ : ರಾಜ್ಯದಲ್ಲಿ ಈಡಿಗ ಸಮಾಜದ ಶಕ್ತಿ ಪ್ರದರ್ಶನಕ್ಕೆ ಎಲ್ಲರೂ ಸಜ್ಜಾಗಬೇಕು. ಕನಿಷ್ಠ 20 ಲಕ್ಷ ಈಡಿಗ ಸಮುದಾಯದವರನ್ನು ಒಳಗೊಂಡ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಸರ್ಕಾರಕ್ಕೆ ನಮ್ಮ ಹಕ್ಕುಗಳನ್ನು ಈಡೇರಿಸುವಂತೆ ಒತ್ತಾಯಿಸುವತ್ತ ನಾವು ಗಮನ ಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದ್ದಾರೆ.

ಇಲ್ಲಿನ ಈಡಿಗರ ಸಮುದಾಯ ಭವನದಲ್ಲಿ ಭಾನುವಾರ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಇತರೆ ಸಮುದಾಯಗಳಲ್ಲಿ ಗುರುಪೀಠ ಗಟ್ಟಿಯಾಗಿದೆ. ಆಯಾ ಸಮುದಾಯದ ಗುರುಗಳು ಹೇಳಿಕೆ ನೀಡಿದರೆ ಸರ್ಕಾರ ಬೇಡಿಕೆ ಈಡೇರಿಸುತ್ತದೆ.

ದುರದೃಷ್ಟವಶಾತ್ ನಮ್ಮ ಸಮುದಾಯದ ಗುರುಗಳಲ್ಲಿ ಒಮ್ಮತವಿದ್ದಂತೆ ಕಾಣುತ್ತಿಲ್ಲ. ಆದ್ದರಿಂದ ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗುರುಪೀಠವನ್ನು ಗಟ್ಟಿಗೊಳಿಸುವ ಜೊತೆಜೊತೆಗೆ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಏರ್ಪಡಿಸುವತ್ತ ಸಹ ನಾವು ಗಮನ ಹರಿಸಬೇಕು ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಈಡಿಗ ಸಮಾಜದಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಬೇಕು. ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಸಮುದಾಯದ ಮಕ್ಕಳನ್ನು ಸಜ್ಜುಗೊಳಿಸಬೇಕು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನನಗೆ ಜನರ ಜೊತೆ ಇರುವ ಸಲಹೆ ನೀಡಿದ್ದರೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿವೃದ್ಧಿಪರವಾಗಿ ಚಿಂತಿಸುವಲ್ಲಿ ಪ್ರೇರಣೆ ನೀಡಿದ್ದಾರೆ. ಇವರಿಬ್ಬರ ಮಾರ್ಗದರ್ಶನದಲ್ಲಿ ನಮ್ಮ ಸಮುದಾಯದ ಜೊತೆ ಇತರ ಎಲ್ಲ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಮಾಜದ ಯುವಶಕ್ತಿ ಜಾಗೃತಗೊಳ್ಳಬೇಕು. ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮುದಾಯದ ಅಭಿವೃದ್ಧಿ ಜೊತೆಗೆ ಎಲ್ಲ ಸಮುದಾಯದ ಜೊತೆ ಸಾಮರಸ್ಯದ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಕೈಗೊಳ್ಳಬೇಕು. ನಾನು ಶಾಸನಕಾಗಿದ್ದಾಗ, ಸಚಿವನಾಗಿದ್ದಾಗ ಜಾತೀಯತೆ ಮಾಡಿಲ್ಲ. ಎಲ್ಲ ಸಮುದಾಯದವರಿಗೂ ಗೇಣಿಹಕ್ಕಿನ ಜೊತೆಗೆ ಭೂಮಿಹಕ್ಕು ಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದೇನೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಸಂತೋಷಕುಮಾರ್ ಎನ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐಎಫ್‌ಎಸ್ ಅಧಿಕಾರಿ ದಾಮೋದರ ನಾಯ್ಕ್, ಪ್ರಮುಖರಾದ ಸುಜಾತ ಕೆ.ಆರ್., ಚಂದ್ರಶೇಖರ ನಾಯ್ಕ್, ಪರಶುರಾಮಪ್ಪ ಈ., ನಾಗಪ್ಪ ಎಚ್.ಕೆ., ಮಂಜಪ್ಪ ಕೆ., ಸುರೇಶ ಸಹನಿ, ಡಾ. ಭರತ್, ಸಂತೋಷಕುಮಾರ್, ಸವಿನಯ್ ಇನ್ನಿತರರು ಉಪಸ್ಥಿತರಿದ್ದರು. ಸತೀಶ್ ನಾಯ್ಕ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವೀರಭದ್ರಪ್ಪ ಸೂರಗುಪ್ಪೆ ಸ್ವಾಗತಿಸಿದರು. ಜ್ಯೋತಿ ಎಂ.ಎಚ್. ನಿರೂಪಿಸಿದರು.

Leave a Reply

Your email address will not be published. Required fields are marked *