w
Headlines
Home » ಕಾಂಗ್ರೆಸ್‌ಗೆ ಅಧಿಕಾರ ವಿಕೇಂದ್ರಿಕರಣದ ಮೇಲೆ ನಂಬಿಕೆ ಇಲ್ಲ: ಶಾಸಕ ಆರಗ ಜ್ಞಾನೇಂದ್ರ ಟೀಕೆ

ಕಾಂಗ್ರೆಸ್‌ಗೆ ಅಧಿಕಾರ ವಿಕೇಂದ್ರಿಕರಣದ ಮೇಲೆ ನಂಬಿಕೆ ಇಲ್ಲ: ಶಾಸಕ ಆರಗ ಜ್ಞಾನೇಂದ್ರ ಟೀಕೆ

IMG 20260223

ಕಾಂಗ್ರೆಸ್‌ಗೆ ಅಧಿಕಾರ ವಿಕೇಂದ್ರಿಕರಣದ ಮೇಲೆ ನಂಬಿಕೆ ಇಲ್ಲ: ಶಾಸಕ ಆರಗ ಜ್ಞಾನೇಂದ್ರ ಟೀಕೆ

ರಿಪ್ಪನ್‌ಪೇಟೆ: ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ವಿಕೇಂದ್ರಿಕರಣದ ಮೇಲೆ ನಂಬಿಕೆ ಇಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ಕೆರೆಹಳ್ಳಿ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ವಿಬಿ–ಜಿ ರಾಮ್ ಜಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸದೆ ಕಾನೂನಿನಡಿಯಲ್ಲಿ ಹೋರಾಟ ನಡೆಸಿದವರು ಬಿಜೆಪಿ ಪಕ್ಷದವರೇ ಎಂದು ಹೇಳಿದರು.

ಭಾರತದ ಆಂತರಿಕ ಸಮಸ್ಯೆಗಳನ್ನು ವಿದೇಶಗಳಲ್ಲಿ ಪ್ರಸ್ತಾಪಿಸಿ ದೇಶದ ಗೌರವಕ್ಕೆ ಧಕ್ಕೆ ತರುತ್ತಿರುವ ರಾಹುಲ್ ಗಾಂಧಿ ಅವರ ನಡೆ ಅರಾಜಕತೆಯ ಮೂಲಭೂತವಾದದ ಪ್ರತಿಬಿಂಬವಾಗಿದೆ ಎಂದು ಟೀಕಿಸಿದರು. ರಾಷ್ಟ್ರೀಯ ಯೋಜನೆಗಳನ್ನು ಕಾಂಗ್ರೆಸ್ ನಿರರ್ಥಕಗೊಳಿಸಲು ಯತ್ನಿಸುತ್ತಿದೆ. ಅಖಂಡ ಭಾರತವನ್ನು ಛಿದ್ರ–ಛಿದ್ರ ಮಾಡಿರುವುದೇ ಕಾಂಗ್ರೆಸ್‌ನ ದೊಡ್ಡ ‘ಸಾಧನೆ’ ಎಂದು ವ್ಯಂಗ್ಯವಾಡಿದರು.

ಸಮಾಜವಾದಿ ಎಂದೇ ಗುರುತಿಸಿಕೊಂಡಿದ್ದ ಸಿದ್ದರಾಮಯ್ಯ ಅವರು ಇದೀಗ ಜಾತಿವಾದದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಶಾಸಕ ಆರಗ ಜ್ಞಾನೇಂದ್ರ, ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿರುವಷ್ಟು ದಿನ ರಾಜ್ಯದ ಅಭಿವೃದ್ಧಿ ಹಿನ್ನಡೆಯಾಗುತ್ತಿದೆ ಎಂದರು. ಶೀಘ್ರದಲ್ಲೇ ರಾಜ್ಯ ಸರ್ಕಾರ ಜನರ ಎದುರು ಬೆತ್ತಲಾಗುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೊಬ್ಬರು ಬಹಿರಂಗವಾಗಿಯೇ ತಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವುದನ್ನು ಉಲ್ಲೇಖಿಸಿದ ಅವರು, ಮೂರು ತಲೆಮಾರು ಕುಳಿತು ತಿನ್ನುವಷ್ಟು ಹಣ ಸಂಗ್ರಹಿಸಿರುವುದಾಗಿ ಹೇಳಿಕೊಂಡಿರುವುದು ದೇಶದ ಸಂಪತ್ತಿನ ಲೂಟಿಗೆ ಸಾಕ್ಷಿ ಎಂದು ಟೀಕಿಸಿದರು. ಪದೇಪದೇ ಸುಳ್ಳು ಹೇಳುವ ಮೂಲಕ ಸತ್ಯವನ್ನು ಮುಚ್ಚಿಡುವ ಕಾಂಗ್ರೆಸ್ ನಾಯಕರಿಗೆ ದೇಶ ಕಟ್ಟುವ ಚಿಂತೆ ಇಲ್ಲ ಎಂದು ಹೇಳಿದರು. ಪಕ್ಷ ದಿವಾಳಿಯಂಚಿಗೆ ತಲುಪಿದ್ದು, ಈ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಾಗಾರವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಉದ್ಘಾಟಿಸಿದರು.

ಕೆರೆಹಳ್ಳಿ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಹರಿಕೃಷ್ಣ ಹಾಗೂ ಸಿದ್ದಲಿಂಗಪ್ಪ ಪಾಲ್ಗೊಂಡಿದ್ದರು. ಬಿಜೆಪಿ ಮಂಡಲ ಪ್ರಭಾರಿ ಮಹೇಶ್, ಹೊಸನಗರ ಬಿಜೆಪಿ ಅಧ್ಯಕ್ಷ ಎನ್. ಸತೀಶ್, ಎಂ.ಎನ್. ಸುಧಾಕರ್, ಎ.ಟಿ. ನಾಗರತ್ನ ನಾಗರಾಜ್, ಜಿ.ಡಿ. ಮಲ್ಲಿಕಾರ್ಜುನ, ಅರುಣ್‌ಕಟ್ಟೆ ಸೇರಿದಂತೆ ಹಲವರು ಹಾಜರಿದ್ದರು.

ಆರ್.ಟಿ. ಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮುದಾ ಸಂಗಡಿಗರು ಪ್ರಾರ್ಥಿಸಿದರು. ಅರುಣ್‌ಕಟ್ಟೆ ಸ್ವಾಗತಿಸಿದರು. ಜಿ.ಡಿ. ಮಲ್ಲಿಕಾರ್ಜುನ ನಿರೂಪಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.