ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾದ ರಿಪ್ಪನ್‌ಪೇಟೆಯ ರಕ್ಷಿತಾ ಕೆ ಎಸ್
ರಿಪ್ಪನ್‌ಪೇಟೆ: ಪಟ್ಟಣದ ಸಮೀಪದ ಕಾಳೇಶ್ವರ ಗ್ರಾಮದ ಯುವತಿ ರಕ್ಷಿತಾ ಕೆ ಎಸ್ ಅವರು ಸಿವಿಲ್ ನ್ಯಾಯಧೀಶೆ (civil judge) ಹುದ್ದೆಗೆ ಆಯ್ಕೆಯಾಗುವ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಗೆ ಹೊಸ ಆಯಾಮ ನೀಡಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿ ನ್ಯಾಯಾಂಗ ಸೇವೆಗೆ ಪ್ರವೇಶ ಪಡೆದಿರುವುದು ಅವರ ಶ್ರಮ, ಸಾಧನೆ ಮತ್ತು ನಿಷ್ಠೆಯ ಪ್ರತಿಬಿಂಬವಾಗಿದೆ.

ಕಾಳೇಶ್ವರ ಗ್ರಾಮದ ಸತ್ಯನಾರಾಯಣ್ ಹಾಗೂ ನಾಗರತ್ನ ದಂಪತಿಗಳ ಪುತ್ರಿಯಾದ ರಕ್ಷಿತಾ, ಶಿಕ್ಷಣದ ಮೊದಲ ಹಂತದಿಂದಲೇ ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ.
ರಕ್ಷಿತಾ ಕೆ ಎಸ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಳೂರು ಸರ್ಕಾರಿ ಶಾಲೆಯಲ್ಲಿ ಪೂರೈಸಿ ನಂತರ ಪಟ್ಟಣದ ಸರ್ಕಾರಿ ಹೈಸ್ಕೂಲ್‌ನಲ್ಲಿ 8ರಿಂದ 10ನೇ ತರಗತಿ ತನಕ ವಿದ್ಯಾಭ್ಯಾಸ ಮುಗಿಸಿದ ಅವರು, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ (ವಾಣಿಜ್ಯ ವಿಭಾಗ) ಪೂರ್ಣಗೊಳಿಸಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿದ್ದಾರೆ.

ಉನ್ನತ ಶಿಕ್ಷಣದ ಭಾಗವಾಗಿ ಶಿವಮೊಗ್ಗದ ನ್ಯಾಷನಲ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ರಕ್ಷಿತಾ, ಬಳಿಕ ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ನ್ಯಾಯಾಂಗ ಅನುಭವ ಸಂಪಾದಿಸಿದ್ದರು.
ಈ ವರ್ಷ ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದ ನೇರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದಾದ್ಯಂತದಿಂದ ಆಯ್ಕೆಯಾದ 83 ವಕೀಲರಲ್ಲಿ ರಕ್ಷಿತಾ ಕೆ ಎಸ್ ಅವರು 42ನೇ ಸ್ಥಾನ ಪಡೆದು ಸಿವಿಲ್ ನ್ಯಾಯಧೀಶೆಯಾಗಿ ನೇಮಕಗೊಂಡಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಯುವತಿಯೊಬ್ಬರು ನ್ಯಾಯಾಂಗ ವ್ಯವಸ್ಥೆಯ ಮಹತ್ವದ ಸ್ಥಾನಕ್ಕೇರಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ರಕ್ಷಿತಾ ಕೆ ಎಸ್ ಅವರ ಈ ಸಾಧನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಪ್ರೇರಣೆಯಾಗಿದ್ದು, “ಶಿಕ್ಷಣ ಮತ್ತು ಪರಿಶ್ರಮವೇ ಯಶಸ್ಸಿನ ದಾರಿ” ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನ್ಯಾಯಧೀಶೆ ರಕ್ಷಿತಾ ಕೆ ಎಸ್ ಅವರಿಗೆ ಪೋಸ್ಟ್‌ಮ್ಯಾನ್ ಸುದ್ದಿ ಬಳಗದ ವತಿಯಿಂದ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.
