w
Headlines
Home » ಉದ್ಯೋಗ ಖಾತ್ರಿ ಹಣ ತಡೆದು ಗ್ರಾಮೀಣ ಬಡವರಿಗೆ ಅನ್ಯಾಯ:  ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಬೇಳೂರು ಆಕ್ರೋಶ

ಉದ್ಯೋಗ ಖಾತ್ರಿ ಹಣ ತಡೆದು ಗ್ರಾಮೀಣ ಬಡವರಿಗೆ ಅನ್ಯಾಯ:  ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಬೇಳೂರು ಆಕ್ರೋಶ

GridArt 20260207

Congress MLA Gopalakrishna Beluru criticised the central government for not releasing funds for the Mahatma Gandhi Employment Guarantee Scheme, stating that rural development works have been affected.

ಉದ್ಯೋಗ ಖಾತ್ರಿ ಹಣ ತಡೆದು ಗ್ರಾಮೀಣ ಬಡವರಿಗೆ ಅನ್ಯಾಯ:  ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಬೇಳೂರು ಆಕ್ರೋಶ

ಹರತಾಳುವಿನಲ್ಲಿ ಹೊಸ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶಂಕುಸ್ಥಾಪನೆ

ರಿಪ್ಪನ್‌ಪೇಟೆ:ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ದೇಶವನ್ನು ಹಸಿವು ಮುಕ್ತಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಮಹತ್ವದ ಯೋಜನೆ. ಆದರೆ ಇಂದಿನ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡದೇ, ಹೆಸರನ್ನೇ ಬದಲಾಯಿಸುವ ಮೂಲಕ ಗಾಂಧೀಜಿಯ ಆಶಯಗಳಿಗೆ ಧಕ್ಕೆ ತಂದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಹರತಾಳು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಎರಡೂವರೆ ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.60ರಷ್ಟು ಅನುದಾನವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ಇದರಿಂದಾಗಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳು ನಿಂತು, ಬಡ ಕೂಲಿಕಾರ್ಮಿಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ತನ್ನ ಶೇ.40ರಷ್ಟು ಪಾಲನ್ನು ನೀಡಿದರೂ ಕೇಂದ್ರದಿಂದ ಹಣ ಬಿಡುಗಡೆಯಾಗದೆ ಇರುವುದರಿಂದ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಇದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉದ್ಯೋಗ ಖಾತ್ರಿ ಯೋಜನೆ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದ್ದು, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಅದರ ಉದ್ದೇಶವೇ ಮಂಕಾಗುತ್ತಿದೆ ಎಂದರು.

ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜವಳ್ಳಿ ಮುಖ್ಯ ರಸ್ತೆಯಿಂದ ಲಿಂಗನಕೊಪ್ಪ ಸಂಪರ್ಕಿಸುವ ರಸ್ತೆ ಹಾಗೂ ರಿಪ್ಪನ್‌ಪೇಟೆ–ಏರಿಸೀಮೆ ಮುಖ್ಯ ಸಂಪರ್ಕ ರಸ್ತೆಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಗುದ್ದಲಿ ಪೂಜೆ ಮೂಲಕ ಚಾಲನೆ ನೀಡಲಾಗಿದೆ ಎಂದು ತಿಳಿಸಿದ ಅವರು, ಇನ್ನೂ ಹೆಚ್ಚಿನ ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಹಿಂದೆ ನಿರ್ಮಿಸಲಾಗಿದ್ದ ಗ್ರಾಮ ಪಂಚಾಯಿತಿ ಕಟ್ಟಡ ಸಣ್ಣದಾಗಿದ್ದ ಕಾರಣ ಇದೀಗ ಸೌಲಭ್ಯಯುಕ್ತ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ;

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗ್ರಾಮೀಣ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರು ಹಾಗೂ ಮಹಿಳೆಯರ ಬದುಕಿಗೆ ಹೊಸ ಆಶಾವಾದ ನೀಡಿವೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ತಾಲೂಕ್ ಬಗುರುಹುಕುಂ ಸಮಿತಿ ಅಧ್ಯಕ್ಷೆ ಸಾಕಮ್ಮ ಮನೋಹರ, ಶಾಸಕ ಗೋಪಾಲಕೃಷ್ಣ ಬೇಳೂರು ಸದಾ ಬಡವರ ಪರವಾಗಿ ನಿಲ್ಲುವ ಜನನಾಯಕ ಎಂದು ಶ್ಲಾಘಿಸಿದರು. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಸರ್ಕಾರಿ ಬಸ್ ಸೌಲಭ್ಯ ದೊರೆತಿರುವುದು ಮಹಿಳೆಯರಿಗೆ ಹಾಗೂ ಕುಟುಂಬಗಳಿಗೆ ದೊಡ್ಡ ನೆರವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ವಾಸುದೇವ ವಹಿಸಿದ್ದರು.

ಸಭೆಯಲ್ಲಿ ತಹಸೀಲ್ದಾರ್ ಭರತರಾಜ ಕೆ.ಎನ್ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಹಿರಿಯ ಮುಖಂಡ ಜಯಶೀಲಗೌಡ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್, ಉಪಾಧ್ಯಕ್ಷ ಕಣಕಿ ನಾರಾಯಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರು,  ಹಾಗೂ ಸ್ವಸಹಾಯ ಸಂಘಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಸೇರಿದಂತೆ ಹಲವರು ಭಾಗವಹಿಸಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.