




ಮಹಿಳೆಯ ಖಾಸಗಿ ಫೊಟೊ ಕಳುಹಿಸಿ 10 ಲಕ್ಷ ರೂ. ಗೆ ಬೇಡಿಕೆ ಇಟ್ಟ ಭೂಪ – ಪ್ರಕರಣ ದಾಖಲು
ಶಿವಮೊಗ್ಗ: ಮಹಿಳೆಯೊಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಬರೋಬ್ಬರಿ ₹10 ಲಕ್ಷ ಹಣವನ್ನು ಬೇಡಿಕೊಂಡ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಸಂತ್ರಸ್ತ ಮಹಿಳೆ ಶಿವಮೊಗ್ಗದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಹಿತಿಯ ಪ್ರಕಾರ, ಅಕ್ಟೋಬರ್ 31ರಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಫೋನ್ ಸಂಖ್ಯೆಗೆ ಖಾಸಗಿ ವಿಡಿಯೋಗಳು ಮತ್ತು ಚಿತ್ರಗಳನ್ನು ಕಳುಹಿಸಿ, “₹10 ಲಕ್ಷ ನೀಡದಿದ್ದರೆ ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಹಂಚುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.
ಈ ಘಟನೆಯಿಂದ ಭಯಗೊಂಡ ಮಹಿಳೆ ಆ ದಿನವೇ ಸಂದೇಶಗಳನ್ನು ಅಳಿಸಿದರೂ, ಆರೋಪಿತ ವ್ಯಕ್ತಿ ನವೆಂಬರ್ 3ರಂದು ಮತ್ತೆ ಸಂಪರ್ಕಿಸಿ, ಹಣ ವರ್ಗಾಯಿಸಲು ಹಲವಾರು ಬ್ಯಾಂಕ್ ಖಾತೆ ವಿವರಗಳನ್ನು ಕಳುಹಿಸಿದ್ದಾನೆ. ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮತ್ತೆ ಬೆದರಿಕೆ ಹಾಕಿದಾನೆ.
ಘಟನೆಯಿಂದ ಬೆಚ್ಚಿಬಿದ್ದ ಮಹಿಳೆ ಕೊನೆಗೂ ಪೊಲೀಸರ ಶರಣಾಗಿದ್ದು, ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.