ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು
ಶಿವಮೊಗ್ಗ : , ಸೆಪ್ಟೆಂಬರ್ 17: ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಅಡಕೆ ತೋಟವೊಂದರಲ್ಲಿ ನಡೆದಿದೆ.
ಹರಮಘಟ್ಟ ಗ್ರಾಮದ ನಿವಾಸಿ ವೆಂಕಟೇಶ್ (45) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ವಿದ್ಯುತ್ ಸ್ಪರ್ಶದಿಂದ ಗಂಭೀರ ಸ್ಥಿತಿಯಲ್ಲಿದ್ದ ವೆಂಕಟೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪರೀಕ್ಷಿಸಿದ ವೈದ್ಯರು ಕಾರ್ಮಿಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಮೃತ ಕಾರ್ಮಿಕನು ತೋಟದಲ್ಲಿ ಅಡಕೆ ಗೊನೆಗಳನ್ನು ಕೊಯ್ಯುವ ವೇಳೆ, ಅಡಕೆ ಕತ್ತರಿಸುವ ಫೈಬರ್ ಕೋಲು ಸಮೀಪದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಸ್ಪರ್ಶವಾಗಿ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ ಎಂದು ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ