ಹೊಸನಗರ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಮರುಸ್ಥಾಪನೆಗೆ ಸಂಪೂರ್ಣ ಬೆಂಬಲ: ಸಂಸದ ಬಿ. ವೈ. ರಾಘವೇಂದ್ರ
Political and religious leaders unite in support of restoring the Hosanagara constituency, with MP B.Y. Raghavendra assuring full backing during the padyatra concluding event at Ripponpete.
ರಿಪ್ಪನ್‌ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಗೆ ರಾಜಕೀಯ ಮತ್ತು ಧಾರ್ಮಿಕ ನಾಯಕರಿಂದ ಒಗ್ಗಟ್ಟಿನ ಬೆಂಬಲ ವ್ಯಕ್ತವಾಗಿದ್ದು, ಹೋರಾಟಕ್ಕೆ ಹೊಸ ಚೈತನ್ಯ ಸಿಕ್ಕಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು “ಹೊಸನಗರ ಕ್ಷೇತ್ರದ ಸ್ಥಾನಮಾನ ಮರುಸ್ಥಾಪನೆಗೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ಘೋಷಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೊಸನಗರ ಕ್ಷೇತ್ರ ಉಳಿಸಿ ಹೋರಾಟದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. “ಮಲೆನಾಡಿನ ಹಿಂದಿನ ಗತ ವೈಭವ ಮರುಕಳಿಸಬೇಕು. ಸಂಸತ್ತಿನಲ್ಲಿ ನಡೆಯಲಿರುವ ಕ್ಷೇತ್ರ ವಿಂಗಡನೆ ಹಾಗೂ ಮಹಿಳಾ ಮೀಸಲಾತಿ ಕುರಿತ ವಿಶೇಷ ಅಧಿವೇಶನ ಹೊಸನಗರ ಕ್ಷೇತ್ರಕ್ಕೆ ಪೂರಕವಾಗಲಿದೆ” ಎಂದು ಅವರು ತಿಳಿಸಿದರು. ಪಶ್ಚಿಮ ಘಟ್ಟ ಪ್ರದೇಶದ ಭೌಗೋಳಿಕ ವೈಶಿಷ್ಟ್ಯತೆಗಳನ್ನು ಪರಿಗಣಿಸದೇ ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, “ಹೊಸನಗರ ಕ್ಷೇತ್ರದ ಮರುಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಹೊಣೆ ಹೊರುತ್ತೇನೆ. ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು. ಸಂಸದ ರಾಘವೇಂದ್ರ ಅವರಿಗೆ ಕಾನೂನಾತ್ಮಕವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಈ ಪಾದಯಾತ್ರೆಯು ಭಾನುವಾರ ಬೆಳಿಗ್ಗೆ ಹೊಸನಗರ ತಾಲೂಕಿನ ನಗರ ಚಿಕ್ಕಪೇಟೆಯಿಂದ ಆರಂಭವಾಗಿ, ಸೋಮವಾರ ಸಂಜೆ ರಿಪ್ಪನ್‌ಪೇಟೆಗೆ ತಲುಪಿತು. ಆಗ ವಿನಾಯಕ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ “ಕ್ಷೇತ್ರ ಮರುಸ್ಥಾಪನೆ” ಘೋಷಣೆಗಳು ಮುಗಿಲುಮುಟ್ಟಿದವು.
ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, “ನಾಡಿಗೆ ಬೆಳಕು ನೀಡಿದ ಹೊಸನಗರ ಈಗ ತನ್ನ ಸ್ಥಾನಮಾನ ಕಳೆದುಕೊಂಡಿದೆ. ಪಕ್ಷಾತೀತ ಹೋರಾಟದ ಮೂಲಕ ಜನಸಾಮಾನ್ಯರಿಗೆ ನ್ಯಾಯ ದೊರಕಿಸಬೇಕಿದೆ”. ಈ ಪ್ರದೇಶದ ಜನರು ದೀರ್ಘಕಾಲದಿಂದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಸೌಲಭ್ಯಗಳಲ್ಲಿ ಹಿಂದುಳಿದಿರುವುದನ್ನು ಅವರು ಉಲ್ಲೇಖಿಸಿ , ಹೊಸನಗರದ ಹಿತಕ್ಕಾಗಿ ರಾಜಕೀಯ ಭೇದಭಾವಗಳನ್ನು ಮೀರಿ ಎಲ್ಲರೂ ಒಂದಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ಹೇಳಿದರು. ಪಕ್ಷಾತೀತ ಹೋರಾಟದ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಇದರ ಮೂಲಕ ಕ್ಷೇತ್ರದ ಹಳೆಯ ಗೌರವವನ್ನು ಮರಳಿ ತರುವ ಪ್ರಯತ್ನ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಮಾತನಾಡಿ ಹೊಸನಗರ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಮರು ಸ್ಥಾಪನೆಗೆ ಪಶ್ಚಿಮ ಘಟ್ಟ ಮಾನದಂಡವಾಗಲಿ’, ‘ಮಲೆನಾಡಿನ ಪಶ್ಚಿಮ ಘಟ್ಟಗಳ ಪರಿಸರದಲ್ಲಿ ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಹೊಸನಗರ ಕ್ಷೇತ್ರದ ಉಳಿವಿಗೆ ಮಠಾಧೀಶರ ಸಾರಥ್ಯದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಹೋರಾಟ ಯಶಸ್ವಿಯಾಗಬೇಕಾದ ಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು’ ಎಂದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, “ರಾಜ್ಯದ ದೊಡ್ಡ ಭೂವಿಸ್ತೀರ್ಣ ಹೊಂದಿರುವ ಹೊಸನಗರ ತಾಲೂಕು ಅಭಿವೃದ್ಧಿಗೆ ವಿಧಾನಸಭಾ ಕ್ಷೇತ್ರವಾಗಿ ಮರುಸ್ಥಾಪನೆ ಅಗತ್ಯ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು.
ಹೊಂಬುಜ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, “ಭೌಗೋಳಿಕ ಕಾರಣಗಳಿಂದ ಹೊಸನಗರ ನಿರಂತರ ಶೋಷಣೆಗೆ ಒಳಗಾಗಿದೆ. ನ್ಯಾಯಕ್ಕಾಗಿ ಹೋರಾಟ ಅನಿವಾರ್ಯ” ಎಂದು ಹೇಳಿದರು. ನಿಟ್ಟೂರು ನಾರಾಯಣ ಗುರು ಮಠದ ರೇಣುಕಾನಂದ ಸ್ವಾಮೀಜಿ ಮತ್ತು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸಮಾರಂಭಕ್ಕೆ ಸಾನ್ನಿಧ್ಯ ವಹಿಸಿದ್ದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್.ಎ. ಚಾಬುಸಾಬ್ ಅವರು ಮಾತನಾಡಿ, ಹೊಸನಗರ ಕ್ಷೇತ್ರವು ಹೊಸದಾಗಿ ರಚಿಸುವ ಕ್ಷೇತ್ರವಲ್ಲ, ಹಿಂದಿನಿಂದಲೂ ಇದ್ದು ಕಳೆದುಕೊಂಡ ಕ್ಷೇತ್ರವನ್ನು ಮರಳಿ ಪಡೆಯುವ ಹೋರಾಟವಾಗಿದ್ದು, ಇದಕ್ಕೆ ಕಟ್ಟುನಿಟ್ಟಾದ ಮಾನದಂಡಗಳಿವೆ. ಕೇವಲ ಹೋರಾಟ ನಡೆಸಿ ಸುಮ್ಮನೆ ಕುಳಿತರೆ ಫಲಿತಾಂಶ ಸಿಗುವುದಿಲ್ಲ ಎಂದು ಹೇಳಿ, ಈ ಹೋರಾಟವನ್ನು ಬೆಂಗಳೂರಿನಿಂದ ದೆಹಲಿವರೆಗೆ ವಿಸ್ತರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೇಂದ್ರ ಸರ್ಕಾರದಲ್ಲಿ ಪ್ರಭಾವವಿದ್ದು, ಅವರಿಂದ ಮಾತ್ರ ನಮ್ಮೆಲ್ಲರ ಬೇಡಿಕೆ ಈಡೇರಲು ಸಾಧ್ಯವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜುಮ್ಮಾ ಮಸೀದಿಯ ಧರ್ಮ ಗುರು ಮುನೀರ್ ಸಖಾಫಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮುಖಂಡರಾದ ಅಲವಳ್ಳಿ ವೀರೇಶ್, ಶ್ವೇತಾ ಬಂಡಿ, ಎನ್.ವರ್ತೇಶ್, ಎನ್. ಚಂದ್ರೇಶ್, ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.
ಮೂಲಕ ಪ್ರತಿಭಟನಕಾರರು ಜಿಲ್ಲಾಧಿಕಾರಿ ಸರ್ಕಾರಕ್ಕೆ ಮನವಿ ರವಾನಿಸಿದರು. ಸಮನ್ವಯ ಕಾಶಿ ನಿರೂಪಿಸಿ, ಎನ್. ವರ್ತೇಶ ಸ್ವಾಗತಿಸಿ, ಆಸಿಫ್ ವಂದಿಸಿದರು.