ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಗೋಕಾಕ್ ಮಾದರಿ ಚಳುವಳಿ: ಏಪ್ರಿಲ್ 6ರಂದು ಬೃಹತ್ ಪಾದಯಾತ್ರೆ
A preparatory meeting held at Ripponpet announced a massive padayatra on April 6 demanding the restoration of the Hosanagara Assembly constituency, with support from political leaders and religious heads.
ರಿಪ್ಪನ್ಪೇಟೆ: ಈ ಹಿಂದೆ ಇದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವ ಮೂಲಕ ಹಿಂದುಳಿದಿರುವ ಈ ತಾಲ್ಲೂಕಿನ ಅಭಿವೃದ್ಧಿಗೆ ವೇಗ ನೀಡಬೇಕೆಂಬ ಉದ್ದೇಶದಿಂದ ಗೋಕಾಕ್ ಮಾದರಿಯ ಚಳುವಳಿ ಆರಂಭಿಸಲು ನಿರ್ಧರಿಸಲಾಗಿದೆ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಏಪ್ರಿಲ್ 6ರಂದು ನಗರದಿಂದ ಬೃಹತ್ ಪ್ರಮಾಣದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮೀಜಿ ತಿಳಿಸಿದ್ದಾರೆ.
ರಿಪ್ಪನ್ಪೇಟೆಯ ಶ್ರೀರಾಮ ಮಂದಿರದಲ್ಲಿ ನಡೆದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಈ ಹಿಂದೆ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ವಿಂಗಡಿಸಿ ಸಾಗರ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಹಂಚಲಾಗಿದೆ. ಇದರ ಪರಿಣಾಮವಾಗಿ ಕ್ಷೇತ್ರವು ಜನನಾಯಕನಿಲ್ಲದಂತಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ಹೇಳಿದರು.
ಹೊಸನಗರ, ಕೊಡಚಾದ್ರಿ, ರಾಮಚಂದ್ರಪುರ ನಗರ ಕೋಟೆ ಸೇರಿದಂತೆ ಹಲವು ಪ್ರವಾಸಿ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿರುವ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ ವಿಷಯದ ಕುರಿತು ಈಗಾಗಲೇ ಮಾಜಿ ಶಾಸಕ ಬಿ. ಸ್ವಾಮಿರಾವ್, ಡಾ. ನಾರಾಯಣಪ್ಪ, ಕಿಮ್ಮನೆ ರತ್ನಾಕರ, ಹರತಾಳು ಹಾಲಪ್ಪ, ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ ಸೇರಿದಂತೆ ಪಕ್ಷಾತೀತವಾಗಿ ಸರ್ವರ ನೇತೃತ್ವದಲ್ಲಿ ಮೂರು–ನಾಲ್ಕು ಸಭೆಗಳು ನಡೆದಿದ್ದು, ಕ್ಷೇತ್ರದ ಉಳಿವಿಗಾಗಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಹಾಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಮತ್ತು ಆರಗ ಜ್ಞಾನೇಂದ್ರ ಸಹ ಹೋರಾಟಕ್ಕೆ ಸಹಕಾರ ನೀಡುತ್ತಿದ್ದಾರೆ. ಹೋರಾಟದ ಸ್ವರೂಪದ ಕುರಿತು ಸಾರ್ವಜನಿಕರ ಸಲಹೆ ಸೂಚನೆಗಳನ್ನೂ ಸಭೆಯಲ್ಲಿ ಬಹಿರಂಗವಾಗಿ ಚರ್ಚಿಸಲಾಯಿತು.
ಚರ್ಚೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್.ಎ. ಚಾಬುಸಾಬ್, ಆರ್.ಎನ್. ಮಂಜುನಾಥ್, ಆನಂದ್ ಮೆಣಸೆ, ಸುರೇಶ್ ಸಿಂಗ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, “ನಾನು ಎಂ.ಎಲ್.ಎ ಸ್ಪರ್ಧೆಗಾಗಿ ಈ ಹೋರಾಟ ಮಾಡುತ್ತಿಲ್ಲ. ನಮ್ಮ ಮುಂದಿನ ಯುವಜನಾಂಗದ ಭವಿಷ್ಯ ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಹೋರಾಟಕ್ಕೆ ನೇತೃತ್ವ ವಹಿಸಿದ್ದೇನೆ. ಈ ಪಾದಯಾತ್ರೆಯಲ್ಲಿ ಗಂಟೆ, ಜಾಗಟೆ, ಶಂಖ, ಕಹಳೆ, ಭಜನೆ, ಡೊಳ್ಳು, ವೀರಗಾಸೆ ತಂಡಗಳು ಭಾಗವಹಿಸಲಿವೆ. ಮಹಿಳೆಯರು, ಮಕ್ಕಳು ಸೇರಿದಂತೆ ತಾಲ್ಲೂಕಿನ ಪ್ರತಿಯೊಂದು ಮನೆಯವರೂ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಬೇಕು. ಸಂಘಟನೆಯನ್ನು ಬಲಪಡಿಸುವ ಮೂಲಕ ಕಿಚ್ಚಿನ ಕ್ರಾಂತಿಯನ್ನು ರೂಪಿಸೋಣ” ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಿಜೆಪಿಯ ಮುಖಂಡ ಎನ್.ಆರ್. ದೇವಾನಂದ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿಗೌಡರು, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎನ್. ಸತೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್. ವರ್ತೇಶ್, ತಾಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ, ಎಂ. ಸುರೇಶ್ ಸಿಂಗ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸುವ ಭರವಸೆ ನೀಡಿದರು.