Headlines

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಶಿಕ್ಷಕಿ – ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಶಿಕ್ಷಕಿ – ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಪತಿಯನ್ನು ಕೊಲೆಗೈದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ, ಮತ್ತೋರ್ವನಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಶನಿವಾರ ಈ ತೀರ್ಪು ಪ್ರಕಟಿಸಿದರು.

ಅಂತರಗಂಗೆಯ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಲಕ್ಷ್ಮೀ, ಗುಲ್ಬರ್ಗದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ಇಮ್ತಿಯಾಜ್ ಅವರನ್ನು ಪ್ರೀತಿಸಿ ಬಳಿಕ ರಿಜಿಸ್ಟರ್ ಮದುವೆಯಾಗಿದ್ದರು. ದಂಪತಿಗೆ ಒಂದು ಮಗುವೂ ಆಗಿತ್ತು. ನಂತರ ಇಮ್ತಿಯಾಜ್ ಸೊರಬ ತಾಲ್ಲೂಕಿನ ತೆಲಗುಂದ ಸರ್ಕಾರಿ ಶಾಲೆಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಲಕ್ಷ್ಮೀ ಭದ್ರಾವತಿಯ ಅಂತರಗಂಗೆಯಲ್ಲಿ ಶಿಕ್ಷಕಿಯಾಗಿದ್ದು, ಜನ್ನಾಪುರದ ಎನ್‌ಟಿಬಿ ಕಚೇರಿ ಸಮೀಪ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಲಕ್ಷ್ಮಿಯ ಮನೆಯ ಪಕ್ಕದಲ್ಲೇ ಆಕೆಯ ಬಾಲ್ಯದ ಗೆಳೆಯ ಕೃಷ್ಣಮೂರ್ತಿ ವಾಸವಾಗಿದ್ದ. ಇವರಿಬ್ಬರ ನಡುವೆ ಆಪ್ತ ಸಂಪರ್ಕ ಬೆಳೆಯುತ್ತಿದ್ದುದು ಪತಿ ಇಮ್ತಿಯಾಜ್‌ಗೆ ಅನುಮಾನ ಹುಟ್ಟಿಸಿತು. ಕುಟುಂಬ ಸದಸ್ಯರೂ ಸಹ ಲಕ್ಷ್ಮಿಗೆ ಬುದ್ಧಿವಾದ ಮಾಡಿದ್ದರು.

2016ರ ಜುಲೈ 7ರ ರಾತ್ರಿ 7.30ರ ವೇಳೆಗೆ ಪತಿ-ಪತ್ನಿಯ ನಡುವೆ ಜಗಳ ನಡೆದ ಸಂದರ್ಭದಲ್ಲಿ, ಲಕ್ಷ್ಮೀ ತನ್ನ ಪ್ರಿಯಕರ ಕೃಷ್ಣಮೂರ್ತಿಯ ಸಹಾಯದಿಂದ ಇಮ್ತಿಯಾಜ್ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಮಾಡಿದರು. ನಂತರ ಮತ್ತೊಬ್ಬ ಶಿವರಾಜ್ ಸಹಾಯದಿಂದ ಮೃತದೇಹವನ್ನು ಭದ್ರಾ ನದಿಗೆ ಎಸೆದರು.

ಮುಂದಿನ ದಿನ ಲಕ್ಷ್ಮೀ, ಇಮ್ತಿಯಾಜ್ ಅವರ ಸಹೋದರನಿಗೆ ವಿಷಯವನ್ನು ಬಿಚ್ಚಿಟ್ಟಳು. ತಾನೇ ಕೊಲೆಗೈದಿದ್ದಾಗಿ ಒಪ್ಪಿಕೊಂಡು, ಕೃಷ್ಣಮೂರ್ತಿ ಹಾಗೂ ಶಿವರಾಜ್ ಸಹಾಯದಿಂದ ಶವವನ್ನು ನದಿಗೆ ಹಾಕಿದ್ದಾಗಿ ಅಳುತ್ತಾ ತಿಳಿಸಿದಳು.

ಇದರಿಂದ ಕಂಗಾಲಾದ ಇಮ್ತಿಯಾಜ್ ಸಹೋದರ, ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಪೊಲೀಸರು ಮೂವರನ್ನೂ ಬಂಧಿಸಿ, ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದರು.

ನ್ಯಾಯಾಲಯವು ಸಾಕ್ಷ್ಯಗಳನ್ನು ಪರಿಶೀಲಿಸಿ, ಆರೋಪಿಗಳ ವಿರುದ್ಧದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಲಕ್ಷ್ಮೀ ಮತ್ತು ಕೃಷ್ಣಮೂರ್ತಿಗೆ ಮರಣದಂಡನೆ ಶಿಕ್ಷೆ ಹಾಗೂ ಶಿವರಾಜ್‌ಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಇದಲ್ಲದೆ, ಆರೋಪಿಗಳಿಗೆ ಒಟ್ಟು 13 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಅದರಲ್ಲಿ 10 ಲಕ್ಷವನ್ನು ಮೃತನ ತಾಯಿಗೆ ಪರಿಹಾರವಾಗಿ ನೀಡಲು, ಉಳಿದ 3 ಲಕ್ಷವನ್ನು ಸರ್ಕಾರದ ಖಜಾನೆಗೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.