ರಿಪ್ಪನ್‌ಪೇಟೆ : ಜಗತ್ತಿಗೆ ಶಾಂತಿ ಸಂದೇಶವನ್ನು ನೀಡುವುದರ ಮೂಲಕ ಶಾಂತಿದೂತರಾದ ಯೇಸು ಕ್ರೈಸ್ತರ ಆದರ್ಶ ಜೀವನಶೈಲಿ ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಗುಡ್ ಶಫರ್ಡ್ ಚರ್ಚ್‌ನ ಧರ್ಮ ಗುರು ಫಾದರ್ ಬಿನೋಯ್ ತಿಳಿಸಿದರು.
ಪಟ್ಟಣದಲ್ಲಿನ ಗುಡ್ ಶಫರ್ಡ್ ಚರ್ಚ್ ಧರ್ಮಸಭೆಯಲ್ಲಿ ಮಾತನಾಡಿದ ಫಾದರ್ ಪ್ರತಿಯೊಬ್ಬರ ಹೃದಯದಲ್ಲಿ ಯೇಸು ಜನಿಸಬೇಕು. ಇರುವವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಅಪರೂಪ ಕಾರ್ಯದ ಮೂಲಕ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಎಲ್ಲರ ನಡುವೆ ಐಕ್ಯತೆ, ಸಮಾನತೆ ಮೂಡಲಿ ವಿಶ್ವದಲ್ಲಿ ಶಾಂತಿ ನೆಲೆಸಲಿ. ಯುವಜನರು ಆಧುನಿಕ ಜೀವನದ ಭರಾಟೆಯಲ್ಲಿ ದಾರಿ ತಪ್ಪದೆ ಉತ್ತಮ ಜೀವನ ನಡೆಸುವಂತಾಗಲಿ ಎಂದು ಕರೆ ನೀಡಿದರು. ಪುಟ್ಟ ಮಕ್ಕಳು, ಯುವಕ, ಯುವತಿಯರು ಮಹಿಳೆಯರು, ಸಂತ ಕ್ಲಾಸ್ ವೇಶ ಧರಿಸಿ ನೃತ್ಯದ ಮೂಲಕ ಗಮನಸೆಳೆದರು.
ಚರ್ಚ್‌ನಲ್ಲಿ ನಿರ್ಮಾಣ ಮಾಡಲಾದ ಕ್ರಿಸ್ಮಸ್ ಟ್ರೀ, ವಿವಿಧ ರೀತಿಯ ನಕ್ಷತ್ರಗಳು, ಯೇಸುವಿನ ಜನನ ಸಂದರ್ಭ ನೆನಪಿಸುವ ಗೋದಲಿ ದಾರಿ ಹೋಕರ ಗಮನ ಸೆಳೆದವು.
ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಮುಂಜಾನೆ ಕ್ರೈಸ್ತ ಧರ್ಮದ ಪದ್ಧತಿಯಂತೆ ದೀಪಾಲಂಕಾರದೊಂದಿಗೆ ಯೇಸುವಿಗೆ ಕ್ರೈಸ್ತ ಧರ್ಮೀಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕ್ರಿಸ್ತನ ಜನನದ ಶುಭ ಗಳಿಗೆಯ ಸ್ಮರಣೆಯ ಸಂಕೇತವಾಗಿ ಶಾಂತಿ, ದೀನತೆಗಾಗಿ ಪ್ರಾರ್ಥನೆ ಸಲ್ಲಿಸಿ ಟದ ಭಕ್ತರು ಮೇಣದ ಬತ್ತಿಗಳನ್ನು ಬೆಳಗಿಸಿದರು.ಚರ್ಚ್‌ಗಳಲ್ಲಿ ಕೇಕ್, ಚಾಕೊಲೇಟ್, ಸಿಹಿ ತಿಂಡಿಗಳನ್ನು ವಿತರಿಸಿ ಸಂಭ್ರಮಿಸಿದರು.
ವಿನಾಯಕ ವೃತ್ತದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ
ರಿಪ್ಪನ್‌ಪೇಟೆ – ಪಟ್ಟಣದ ವಿನಾಯಕ ವೃತ್ತದಲ್ಲಿ ಕ್ರಿಶ್ಚಿಯನ್ ಬಾಂಧವರು ಸಾರ್ವಜನಿಕರೊಂದಿಗೆ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ವಿನಾಯಕ ವೃತ್ತದಲ್ಲಿ ಜಾತಿ ಮತ ಪಂಥಗಳ ಬೇಧವನ್ನು ಮರೆತು ಎಲ್ಲಾ ಧರ್ಮೀಯರು ಒಟ್ಟಾಗಿ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಮರಸ್ಯವನ್ನು ಮೆರೆದರು.
ಈ ಸಂಧರ್ಭದಲ್ಲಿ ಹಿಂದೂ ಮಹಾಸಭಾ ಅಧ್ಯಕ್ಷ ರಾಮಚಂದ್ರ ಬಳೇಗಾರ್ ಕಾರ್ಯದರ್ಶಿ ಸುಧೀರ್ ಪಿ ,ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ , ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ದನಲಕ್ಷ್ಮಿ , ಕಲಾ ಕೌಸ್ತುಭ ಕನ್ನಡ ಸಂಘದ ರವೀಂದ್ರ ಕೆರೆಹಳ್ಳಿ , ಕ್ರೈಸ್ತ ಸಮುದಾಯದ ಮುಖಂಡರಾದ ವರ್ಗೀಸ್ ,ಸೆಬಾಸ್ಟಿಯನ್ , ವರ್ಗೀಸ್ ಬೆಟ್ಟಿನಕೆರೆ , ಗ್ರಾಪಂ ಸದಸ್ಯರಾದ ಆಸೀಫ಼್ , ಚಂದ್ರೇಶ್ , ನಿರೂಪ್ ಕುಮಾರ್ , ಅಶ್ವಿನಿ ರವಿಶಂಕರ್ , ನಿರುಪಮಾ ರಾಕೇಶ್ , ಸಾರಾಭಿ ಹೈದರ್ ,ಮತ್ತು ಶೈಲಾ ಪ್ರಭು ,ರಾಷ್ಟ್ರ ಪ್ರಶಸ್ತಿ ವಿಜೇತ ಬೋಜಪ್ಪ ಮಾಸ್ತರ್ , ಗುಡ್ ಶೆಪರ್ಡ್ ಯುವ ಒಕ್ಕೂಟದ ಪ್ರಮುಖರಾದ ರಾಬಿನ್ ,ಜಿತಿನ್ , ಶಾಂಟೋ ,ದಿನೂ , ಡಿವೈನ್ , ದೀಪೂ ,ಜೋಬಿ ಹಾಗೂ ದಿಲೀಪ್ ಇದ್ದರು.