ರಕ್ತದಾನಿ ಹಾಲೇಶಪ್ಪಗೆ ಸಂಘ ಸಂಸ್ಥೆಗಳಿಂದ ಸನ್ಮಾನ
ಶಿವಮೊಗ್ಗ: ವೃತ್ತಿಯ ಜತೆಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಕ್ತದಾನಿ, ಪರಿಸರ ಪ್ರೇಮಿ, ಸಮಾಜ ಸೇವಕ, ಭದ್ರಾವತಿ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ ಅವರಿಗೆ ಶಿವಮೊಗ್ಗ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ ಸ್ಪಂದನ ಹೆಲ್ತ್ ಫೌಂಡೇಷನ್, ಸಂಜೀವಿನಿ ರಕ್ತನಿಧಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸ್ಪಂದನ ಹೆಲ್ತ್ ಫೌಂಡೇಷನ್ ಅಧ್ಯಕ್ಷ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಉಪಾಧ್ಯಕ್ಷ ತಾರಾನಾಥ್ ಮಾತನಾಡಿ, ಹಾಲೇಶಪ್ಪ ಅವರು ಈಗಾಗಲೇ ೪೪ ಬಾರಿ ರಕ್ತದಾನ ಮಾಡಿ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಪುಣ್ಯದ ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ರಕ್ತದಾನಿ ಹಾಲೇಶಪ್ಪ ಅವರು ರಕ್ತದಾನದ ಜತೆಯಲ್ಲಿ ಪರಿಸರ ಸಂರಕ್ಷಣೆ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಾರೆ. ಇಂತಹ ಉತ್ತಮ ವ್ಯಕ್ತಿಗಳಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಲೇಶಪ್ಪ ಅವರು, ಮನುಷ್ಯನಾಗಿ ಜನಿಸಿದ ಬಳಿಕ ಸಮಾಜದ ಋಣ ತೀರಿಸುವ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಜತೆಯಲ್ಲಿ ರಕ್ತದಾನದ ಮಹತ್ವ ತಿಳಿಸಿಕೊಡುವ ಕೆಲಸ ಮಾಡಿರುವ ಹೆಮ್ಮೆ ಇದೆ ಎಂದು ಹೇಳಿದರು.
ರೆಡ್‌ಕ್ರಾಸ್ ಕಾರ್ಯದರ್ಶಿ ಡಾ|| ದಿನೇಶ್ ಮಾತನಾಡಿ, ರಕ್ತದಾನದಿಂದ ಆಗುವ ಪ್ರಯೋಜನಗಳು ಹಾಗೂ ರಕ್ತದ ಕುರಿತ ಮಾಹಿತಿಗಳನ್ನು ವಿವರಿಸಿದರು. ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಅಧ್ಯಕ್ಷ ಧರಣೇಂದ್ರ ದಿನಕರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಡಾ|| ದಿನಕರ್, ಶೃತಿ, ರೆಡ್‌ಕ್ರಾಸ್ ನಿರ್ದೇಶಕ ನವೀನ್.ಜಿ.ಪಿ., ಲಕ್ಷ್ಮೀ, ಪೂಜಾ, ಸಿಂಧು, ಕವಿತಾ, ಟ್ರಾಫಿಕ್ ಎಎಸ್‌ಐ ತಿಪ್ಪೇಶ್ ಉಪಸ್ಥಿತರಿದ್ದರು.