Headlines

ಹಣಗೆರೆ ಹುಂಡಿ ಎಣಿಕೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಕೈಚಳಕ.!? – ಮರು ಎಣಿಕೆ ಪ್ರಾರಂಭ

ಹಣಗೆರೆ ಹುಂಡಿ ಎಣಿಕೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಕೈಚಳಕ.!? – ಮರು ಎಣಿಕೆ ಪ್ರಾರಂಭ

ಧಾರ್ಮಿಕ ಕೇಂದ್ರಗಳಲ್ಲಿ ಸೌಹಾರ್ದ ಕೇಂದ್ರ ಎಂದೇ ಬಿಂಬಿತವಾಗಿರುವ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಹುಂಡಿಯ ಹಣ ಎಣಿಸುವ ಕಾರ್ಯದಲ್ಲಿ ಏರುಪೇರು ಆಗಿದ್ದು ನಿಜವೇ?

ಆ ತಪ್ಪು ಯಾರಿಂದ ಆಯ್ತು? ತಪ್ಪನ್ನು ಸರಿಪಸುವ ಕೆಲಸ ಆಗುತ್ತಾ? ಹೀಗೆ ಹಲವು ಪ್ರೆಶ್ನೆಗಳು ಈಗ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕವಾಗಿ 2 ಕೋಟಿ ರೂಪಾಯಿಗೂ ಹೆಚ್ಚು ಹುಂಡಿ ಹಣ ಸಂಗ್ರಹವಾಗುತ್ತಿದೆ. ತ್ರೈಮಾಸಿಕ ಎಣಿಕೆಯಲ್ಲಿ ಸರಾಸರಿ 50 ಲಕ್ಷ ಹಣ ಸಂಗ್ರಹಣೆಯಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿಯೇ ಅತೀ ಹೆಚ್ಚು ಹುಂಡಿಹಣ ಸಂಗ್ರಹವಾಗುವ ಮುಜರಾಯಿ ದೇವಸ್ಥಾನಗಳಲ್ಲಿ ತಾಲೂಕಿನ ಹಣಗೆರೆಕಟ್ಟೆ ದೇವಸ್ಥಾನ ಕೂಡ ಒಂದಾಗಿದೆ.

ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನದ ಹುಂಡಿ ಎಣಿಕೆಗೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಗಳು ತೆರಳುತ್ತಾರೆ. ಸಾರ್ವಜನಿಕರು ಅಥವಾ ಆಡಳಿತ ಮಂಡಳಿಗೆ ಅವಕಾಶ ನೀಡದೆ ಹಣವನ್ನು ಅಧಿಕಾರಿಗಳು ಎಣಿಸುತ್ತಾರೆ. ಈಗ ಆ ಎಣಿಕೆ ಪ್ರಕ್ರಿಯೆ ಬಗ್ಗೆ ಅನುಮಾನ ಹುಟ್ಟಿಸುವ ರೀತಿ ಮಾತುಗಳು ಕೇಳಿಬಂದಿದ್ದು ಇದಕ್ಕೆ ಅಧಿಕಾರಿಗಳು ಹೇಗೆ ಉತ್ತರ ನೀಡುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.

ಪ್ರತಿಯೊಂದುಮುಜರಾಯಿ ದೇವಸ್ಥಾನದ ಹುಂಡಿ ಹಣ ಎಣಿಸುವಾಗ ಒಂದು ಲಕ್ಷ ಮೌಲ್ಯದ ಹಣದ ಕಟ್ಟುಗಳನ್ನು ಸಿದ್ಧಪಡಿಸಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾರೆ. ಆದರೆ ಹಣಗೆರೆ ಕಟ್ಟೆಯ ದೇವಸ್ಥಾನದಲ್ಲಿ ಆದ ಘಟನೆಯೇ ಬೇರೆ ಆಗಿದೆ. ಗುರುವಾರ ಎಂದಿನಂತೆ ಹೊಸದಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡ ತಹಶೀಲ್ದಾರ್ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಬೆಳಗ್ಗೆಯಿಂದ ಹುಂಡಿ ಎಣಿಕೆ ಮಾಡಿದೆ. ಸಂಜೆಯ ವೇಳೆಗೆ ಇನ್ನೇನು ಹುಂಡಿ ಹಣ ಮುಕ್ತಾಯ ಆಗಲಿದೆ ಎನ್ನುವಾಗ ನೂತನವಾಗಿ ಸರ್ಕಾರ ರಚನೆ ಮಾಡಿದ ಆಡಳಿತ ಮಂಡಳಿ ಅನುಮಾನ ವ್ಯಕ್ತಪಡಿಸಿದೆ.

ಅದಕ್ಕೆ ತಕ್ಕಂತೆ ಒಂದು ಲಕ್ಷ ಮೌಲ್ಯದ ಹಣದ ಕಟ್ಟುಗಳನ್ನು ಎಲ್ಲರೆದುರು ಮತ್ತೊಮ್ಮೆ ಎಣಿಸಿದಾಗ ಹೆಚ್ಚುವರಿ ಹಣ ಇರುವುದು ಪತ್ತೆಯಾಗಿದೆ. ಒಂದು ಲಕ್ಷ ಕಟ್ಟಿನೊಳಗೆಎರಡರಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಹಣ ಲಭ್ಯವಾಗಿದೆ. ಇಂತಹ ಹಣ ಯಾರಿಗೆ ಹೋಗುತ್ತದೆ? ಅಧಿಕಾರಿಗಳ ಅಥವಾ ಬ್ಯಾಂಕ್ ಸಿಬ್ಬಂದಿಗಳ ಪಾಲಾಗುತ್ತಾ? ಎಂಬ ಚರ್ಚೆ ಅಲ್ಲಿನ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ಆಗಿ ಮೊದಲ ಬಾರಿ ಹಣಗೆರೆ ಹುಂಡಿ ಎಣಿಕೆ ಮಾಡುವ ಸಂದರ್ಭದಲ್ಲಿ ಅಲ್ಲಿನ ದಂಧೆಯ ಕರಾಳತೆ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಬೆಚ್ಚಿ ಬಿದ್ದಿದ್ದಾರೆ. ದಂಧೆಯ ಬಗ್ಗೆ ಏನೇನು ಗೊತ್ತಿರದಿದ್ದರು ತಂಡದ ನೇತೃತ್ವ ವಹಿಸಿಕೊಂಡ ತಹಶೀಲ್ದಾರ್ ಪ್ರಕರಣವನ್ನು ಹೇಗೆ ಬೇಧಿಸಬೇಕು ಎಂಬ ಸುಳಿಗೆ ಸಿಲುಕಿದಂತಿದೆ. ನಂತರ ಆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡದೇ ತಾಲೂಕು ಕಚೇರಿಯ ಟ್ರಜರಿಗೆ ತಂದು ಇಟ್ಟು ಇಂದು ಮತ್ತೊಮ್ಮೆ ಹಣಗೆರೆ ಕಟ್ಟೆಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗಿದೆ.

ಅಲ್ಲಿ ಸಾರ್ವಜನಿಕರ ಎದುರು ಮತ್ತೊಮ್ಮೆ ಹಣ ಎಣಿಕೆ ಕಾರ್ಯ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದ್ದು ಇಂದಾದರೂ ದೇವಸ್ಥಾನದ ಹುಂಡಿ ಹಣದ ಲೆಕ್ಕ ಇಂದು ಪಕ್ಕ ಆಗುತ್ತಾ? ಅಥವಾ ಮತ್ತೆ ಯಾರದ್ದೋ ಪಾಲಾಗುತ್ತಾ? ಎಂಬುದಾಗಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *