ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ – 62ವರ್ಷದ ವೃದ್ದನಿಗೆ ಶಿಕ್ಷೆ ಪ್ರಕಟ
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 27 ವರ್ಷದ ಮಹಿಳೆಯನ್ನ ಲೈಂಗಿಕವಾಗಿ ಬಳಸಿಕೊಂಡ 62 ವರ್ಷದ ವೃದ್ಧನಿಗೆ ಇಲ್ಲಿನ 2ನೇ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2016ನೇ ಸಾಲಿನಲ್ಲಿ ಶಿವಮೊಗ್ಗ ಟೌನ್ ನ 62 ವರ್ಷದ ವ್ಯಕ್ತಿಯೊಬ್ಬ 27 ವರ್ಷದ ಮಹಿಳೆಯೊಬ್ಬಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು. ಆಕೆಯ ಫೋಟೋಗಳನ್ನು ಇಟ್ಟುಕೊಂಡು, ಒಂದು ವೇಳೆ ದೂರು ನೀಡದರೆ ನಿನ್ನ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದನು. ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 417, 406, 420, 506 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಯಾಗಿದ್ದ ಕೋಟೆ ಪೊಲೀಸ್ ಠಾಣೆಯ ಸಿಪಿಐ ಚಂದ್ರಪ್ಪ. ಕೆ.ತನಿಖೆ ಪೂರೈಸಿ ಘನ 2ನೇ ಜೆಎಂಎಫ್ಸಿ ನ್ಯಾಯಾಲಯ, ಶಿವಮೊಗ್ಗಕ್ಕೆ ಆರೋಪಿತನ ವಿರುದ್ದ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕಿರಣ್ ಕುಮಾರ್ ವಾದ ಮಂಡಿಸಿದ್ದರು. ಘನ 2ನೇ ಜೆಎಂಎಫ್ಸಿ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಯ ವಿರುದ್ದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶಾರದಾ ಕೊಪ್ಪದರವರು ಪ್ರಕರಣದ ಆರೋಪಿಗೆ 1 ವರ್ಷ 6 ತಿಂಗಳು ಸಾದಾ ಕಾರಾವಾಸ ಶಿಕ್ಷೆ ಮತ್ತು ರೂ 40,000/- ರೂ ಗಳ ದಂಡ, ದಂಡದ ಮೊತ್ತದಲ್ಲಿ 36,000/- ರೂಗಳನ್ನು ನೊಂದ ಮಹಿಳೆಗೆ ನೀಡಲು ಆದೇಶಿಸಿರುತ್ತಾರೆ.