ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಿನ್ನಲೆ ಬೈಕ್ ರ‍್ಯಾಲಿ , ಡಿಜೆ ನಿಷೇಧ – ನಿಯಮ ಮೀರಿದ್ರೆ ಕಠಿಣ ಕ್ರಮ : ಸಿಪಿಐ ಗುರಣ್ಣ ಹೆಬ್ಬಾಳ್ ಖಡಕ್ ವಾರ್ನಿಂಗ್
ಸೆ. 6 ಮತ್ತು 7ರಂದು ಗೌರಿ-ಗಣೇಶ ಹಬ್ಬ ಹಾಗೂ ಸೆ. 16ರಂದು ಈದ್ ಮಿಲಾದ್ ಹಬ್ಬ ಆಚರಿಸಲಾಗುತ್ತಿದ್ದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹೊಸನಗರ ತಾಲ್ಲೂಕಿನಾದ್ಯಂತ ಬೈಕ್ ರ‍್ಯಾಲಿ ಹಾಗೂ ಡಿಜೆ ಸಿಸ್ಟಂ ಅನ್ನು ನಿಷೇಧಿಸಲಾಗಿದ್ದು ಬಳಸಿದ್ದು ಕಂಡು ಬಂದರೇ ಕಠಿಣ ಕ್ರಮ ಹಾಗೂ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಎಚ್ಚರಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಹೊಸನಗರ ತಾಲ್ಲೂಕಿನಾದ್ಯಂತ ಸೆ. 07 ರಂದು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಹಾಗೂ ಸೆ.16 ರಂದು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸಲಿದ್ದು ಈ ಸಂಬಂಧ ಹೊಸನಗರ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸೌಹಾರ್ದತೆ ಮತ್ತು ಶಾಂತಿ ಹಾಗು ಸಾರ್ವಜನಿಕ ಹಿತದೃಷ್ಟಿಯಿಂದ ಸೆ. 07 ರಿಂದ ಗಣೇಶೋತ್ಸವ ಆಚರಣೆಗಳು ಪೂರ್ಣಗೊಳ್ಳುವವರೆಗೆ ಹಾಗೂ ಸೆ.16 ರಂದು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜಿ ಸಿಸ್ಟಂ ಹಾಗೂ ಬೈಕ್ ರ‍್ಯಾಲಿಗಳನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದು ಜಿಲ್ಲಾಧಿಕಾರಿಗಳ ಮುಂದಿನ ಅದೇಶ ಬರುವವರೆಗೆ ಇವೆರಡೂ ನಿಷೇಧಿಸಲ್ಪಟ್ಟಿರುತ್ತದೆ ಎಂದರು.
ಹೊಸನಗರ ತಾಲ್ಲೂಕಿನ ಜನರು ಶಾಂತಿ ಪ್ರಿಯರಾಗಿದ್ದು ಹಿಂದು-ಮುಸ್ಲಿಂ-ಕ್ರೈಸ್ತರು ಅಣ್ಣ ತಮ್ಮದಿರಂತೆ ಇಲ್ಲಿಯವರೆಗೆ ಹೊಂದಿಕೊಂಡು ಹೋಗುತ್ತಿದ್ದು ಮುಂದಿನ ದಿನಗಳಲ್ಲಿಯೂ ಯಾವುದೇ ಚ್ಯುತಿ ಬಾರದಂತೆ ಕಾಪಾಡಿಕೊಂಡು ಹೋಗಬೇಕು ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಕಿವಿಗೊಡಬಾರದು. ತಾಲ್ಲೂಕಿನಲ್ಲಿ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಕರೆ ನೀಡಿದರು.
 
                         
                         
                         
                         
                         
                         
                         
                         
                         
                        