ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ – ಬಿಜೆಪಿ ಮಾಧ್ಯಮ ಪ್ರಮುಖ್ ಶರತ್ ವಿರುದ್ಧ ಪ್ರಕರಣ ದಾಖಲು | Shivamogga
ಶಿವಮೊಗ್ಗ : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಸಂತ್ರಸ್ತೆಯಿಂದಲೇ ನಾಲ್ಕು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ಶರತ್ ಕಲ್ಯಾಣಿ ಎಂಬಾತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಶರತ್ ಕಲ್ಯಾಣಿಯು ತನಗೆ ಮದುವೆಯಾಗಿರುವ ಮಾಹಿತಿ ಮುಚ್ಚಿಟ್ಟು ‘ನಾನಿನ್ನು ಅವಿವಾಹಿತ. ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗಿ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ’ ಎಂದು ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ 43 ವರ್ಷದ ವಿಚ್ಛೇದಿತ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
7-8 ತಿಂಗಳಿಂದ ಮಹಿಳೆ ಜೊತೆ ನಿರಂತರ ಸಂಪರ್ಕದಲ್ಲಿದ್ದ ಶರತ್, ಸಂತ್ರಸ್ತ ಮಹಿಳೆಯು ಮದುವೆಯಾಗು ಎಂದು ಒತ್ತಾಯಿಸಿದರೆನ್ನಲಾಗಿದೆ. ಈ ವೇಳೆ ಶರತ್, ‘ನನಗೆ ಹಣಕಾಸಿನ ಸಮಸ್ಯೆ ಇದೆ. ಅದು ಬಗೆಹರಿದ ನಂತರ ಮದುವೆಯಾಗುತ್ತೇನೆ’ ಎಂದು ಭರವಸೆ ನೀಡಿದ್ದನು. ಅಲ್ಲದೆ, ಈಗ ನನಗೆ ಸಹಾಯ ಮಾಡು ಎಂದು ಕೇಳಿದ್ದ. ಈ ವೇಳೆ ಮಹಿಳೆಯು ಹಲವು ಬಾರಿ ಹಣ ನೀಡಿದ್ದು, ಒಟ್ಟು ನಾಲ್ಕು ಲಕ್ಷ ಹಣವನ್ನು ಶರತ್‌ಗೆ ನೀಡಿದ್ದರು. ನಂತರ ಮಹಿಳೆ ಮದುವೆಗೆ ಒತ್ತಾಯಿಸಿದಾಗ ಶರತ್ ಆಕೆಯ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದಲ್ಲದೆ, ಫೋನ್ ಸಂಪರ್ಕವನ್ನೂ ಕಡಿದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕೇಳಲು ಮಹಿಳೆ ಗುಂಡಪ್ಪ ಶೆಡ್ಡಿನಲ್ಲಿರುವ ಶರತ್ ಕಲ್ಯಾಣಿಯ ಮನೆಗೆ ಹೋದಾಗ ಆತನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇನ್ನೊಮ್ಮೆ ನಮ್ಮ ಮನೆ ಬಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ಹಣ ಪಡೆದು ಶರತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ಮಹಿಳೆಯು ಜುಲೈ 26ರಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.