ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಪೊಲೀಸರ ದಾಳಿ – ಓರ್ವ ವಶಕ್ಕೆ..!!
ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಹುಂಚ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿಯ ಮೇಲೆ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ದಾಳಿ ನಡೆಸಿದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ವರ್ಗಾವಣೆಗೊಂಡಿದ್ದ ಪಿಎಸ್‌ಐ ಪ್ರವೀಣ್ ಪುನಃ ಠಾಣೆಯ ಚಾರ್ಜ್ ವಹಿಸಿಕೊಳ್ಳುತಿದ್ದಂತೆಯೇ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದು ಅಕ್ರಮ ಮದ್ಯ ಮಾರಾಟ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಹುಂಚ ಗ್ರಾಮದ ನಾಗಶ್ರೀ ಪ್ರಾವಿಜನ್ ಸ್ಟೋರ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಚಂದ್ರಕಲಾ ಎಂಬಾಕೆಯನು ವಶಕ್ಕೆ ಪಡೆದು ಅಕ್ರಮ ಮದ್ಯವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಸಿಬ್ಬಂದಿಗಳಾದ ಉಮೇಶ್ ,ಸಂತೋಷ್ ಕೊರವರ ಮತ್ತು ಮಧುಸೂಧನ್ ಇದ್ದರು.
——————————————————————
ಹೊಸನಗರ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟದ ಹಾವಳಿ – ಕಣ್ಮುಚ್ಚಿ ಕೈ ಬಿಸಿ ಮಾಡಿಕೊಂಡು ಕುಳಿತಿದೆ ಅಬಕಾರಿ ಇಲಾಖೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿ ಹೊಟೇಲ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಸುತ್ತಿದ್ದರೂ ತಾಲೂಕಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ನಮಗೆ ಬರುವುದು ಬಂದರೆ ಸಾಕು ಊರು ಹಾಳಾಗಿ ಹೋಗಲಿ ಎನ್ನುತ್ತಿರುವ ಹಾಗೆ ಇರುವುದನ್ನು ಕಂಡು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಹೊಸನಗರ ತಾಲೂಕಿನಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟದ ದಂಧೆ ಕಣ್ಣಿಗೆ ಕಾಣಿಸುತ್ತಿದ್ದರೂ ತಮಗೆ ಏನೂ ಗೊತ್ತಿಲ್ಲದಂತೆ ತಾಲೂಕಿನ ಅಬಕಾರಿ ಅಧಿಕಾರಿಗಳು ನಿದ್ರೆಗೆ ಜಾರಿದಂತೆ ನಟಿಸಿ ಜೇಬು ತುಂಬಿಸಿಕೊಳ್ಳುತಿದ್ದಾರೆ. ಇವರ ಈ ನಿರ್ಲಕ್ಷ್ಯತನವು ಗ್ರಾಮೀಣ ಭಾಗದ ಅನೇಕ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿವೆ. ಕುಡಿತದ ಚಟಕ್ಕೆ ಬೀಳುತ್ತಿರುವ ಯುವ ಜನಾಂಗ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವ ದುರಂತ ಚಿತ್ರಣಗಳು ಕಂಡುಬರುತ್ತಿವೆ. ಇಷ್ಟಾದರೂ ಲಜ್ಜೆಗೆಟ್ಟ ಅಧಿಕಾರಿಗಳು ಮಾಮೂಲು ವಸೂಲಾತಿಯಲ್ಲಿಯೇ ನಿರತರಾಗಿ ಹಳ್ಳಿಗಳ ನೆಮ್ಮದಿ ಹಾಳು ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ತಾಲೂಕಿನಲ್ಲಿರುವ ಎಲ್ಲಾ ಅಕ್ರಮ ಮದ್ಯದ ಅಂಗಡಿಗಳಲ್ಲಿ ತಿಂಗಳಿಗೆ ಇಂತಿಷ್ಟು ಎಂದು ಮಾಮೂಲಿ ನಿಗದಿಯಾಗಿದ್ದು ಅದನ್ನು ವಸೂಲಿ ಮಾಡಲು ಖುದ್ದು ತಾಲೂಕಿನ ಪ್ರಮುಖ ಅಬಕಾರಿ ಅಧಿಕಾರಿಯೇ ಹೋಗುತ್ತಾರೆ ಎಂದು ಸಾರ್ವಜನಿಕರು ಆಡಿಕೊಳ್ಳುತಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ರೀತಿಯ ಅಂಗಡಿಗಳು ತೆರೆಯಲ್ಪಟ್ಟಿವೆ. ಕಿರಾಣಿ ಅಂಗಡಿಗಳಿಂದ ಹಿಡಿದು ಬೀಡಿ ಬೆಂಕಿಪೊಟ್ಟಣ ಮಾರುವ ಶೆಡ್‍ಗಳ ತನಕ ಅಂಗಡಿಗಳು ತಲೆಎತ್ತಿವೆ. ಇನ್ನು ಕೆಲವು ಕಡೆ ಮನೆಗಳೇ ಹೋಟೆಲ್‍ಗಳಾಗಿವೆ. ಇಂತಹ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ. ಆ ಊರಿನ ಅಷ್ಟೆ ಅಲ್ಲ, ಸುತ್ತಮುತ್ತಲಿನ ಜನರಿಗೂ ಇದರ ಅರಿವಿದೆ. ಹಿಂದೆಲ್ಲ ರಾತ್ರಿವೇಳೆ ಮಾತ್ರವೆ ಇಂತಹ ಅಂಗಡಿಗಳಿಗೆ ಕದ್ದು ಮುಚ್ಚಿ ನುಗ್ಗಿ ಹೋಗಿ ಬರುತ್ತಿದ್ದವರು ಈಗ ದಿನದ ವ್ಯವಹಾರ ರೂಢಿಸಿಕೊಂಡಿದ್ದಾರೆ.
ಅಬಕಾರಿ ಇಲಾಖೆಯವರಿಗೆ ಹಳ್ಳಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟದ ಚಟುವಟಿಕೆಗಳು ಗೊತ್ತಿಲ್ಲವೆಂದಲ್ಲ. ಎಲ್ಲವೂ ತಮ್ಮ ಮೂಗಿನಡಿಯಲ್ಲಿಯೇ ನಡೆಯುತ್ತಿವೆ. ಆದರೆ ಈ ಅಕ್ರಮ ದಂಧೆಗಳಿಗೆ ಅವರ ಕುಮ್ಮಕ್ಕೂ ಮತ್ತು ಸಹಕಾರ ಇರುವುದರಿಂದ ಎಲ್ಲವೂ ರಾಜಾರೋಷವಾಗಿ ನಡೆದು ಹೋಗುತ್ತಿದೆ. ಯಾರಾದರೂ ದೂರಿದರೆ ಮಾತ್ರ ನೆಪಮಾತ್ರಕ್ಕೆ ದಾಳಿ ಮಾಡುವ ಪ್ರಸಂಗಗಳು ಅಲ್ಲಲ್ಲಿ ಕಂಡುಬರುತ್ತಿವೆ.
ಇತ್ತೀಚೆಗೆ ತಾಲೂಕಿನ ಒಂದೆರಡು ಕಡೆ ಅಬಕಾರಿ ದಾಳಿ ನಡೆದಿರುವುದು ವರದಿಯಾಗಿದೆ. ಇದರ ಹಿಂದೆಯೂ ಕೆಲವು ತಂತ್ರಗಾರಿಕೆಗಳಿವೆ. ಒಂದು ಕಡೆ ದಾಳಿ ಮಾಡುವ ಮೂಲಕ ಇತರರಿಗೆ ಎಚ್ಚರಿಕೆ ಕೊಡುವುದು, ನಮ್ಮನ್ನು ನೋಡಿಕೊಳ್ಳಿ ಎಂಬ ಸಂದೇಶ ರವಾನಿಸುವುದು ಇದರ ಹಿಂದಿನ ತಂತ್ರಗಾರಿಕೆ…
ಅಕ್ರಮ ಮದ್ಯದ ಮೇಲೆ ನಡೆಸುವ ದಾಳಿಗಳು ಪ್ರಾಮಾಣಿಕವಾಗಿ ಇದ್ದರೆ ಇಷ್ಟೊತ್ತಿಗಾಗಲೇ ಅದೆಷ್ಟೋ ಅಕ್ರಮ ಮದ್ಯದಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸಬಹುದು ಆದರೆ ಇವರ ಲಂಚದ ದಾಹಕ್ಕೆ ಗ್ರಾಮೀಣ ಭಾಗದ ಕುಟುಂಬಗಳು ಬೀದಿಗೆ ಬರುತ್ತಿದೆ. ಲಂಚಬಾಕ ಅಬಕಾರಿ ಅಧಿಕಾರಿಗಳು ಕಾನೂನಿನ ಕಣ್ಣಿಗೆ ಮಣ್ಣೇರಚಬಹುದು ಆದರೆ ಆ ಬಡ ಕುಟುಂಬದ ಮಕ್ಕಳ ಶಾಪ ತಟ್ಟದೇ ಇರಲಾರದು.
✒ ರಫ಼ಿ ರಿಪ್ಪನ್‌ಪೇಟೆ