ಆಧ್ಯಾತ್ಮಿಕ ಜ್ಞಾನಪ್ರಭೆ ಜೀವನ ಮೌಲ್ಯಗಳನ್ನು ಸಂವರ್ಧಿಸಲಿ – ಹೊಂಬುಜ ಶ್ರೀಗಳು | hombuja

ಆಧ್ಯಾತ್ಮಿಕ ಜ್ಞಾನಪ್ರಭೆ ಜೀವನ ಮೌಲ್ಯಗಳನ್ನು ಸಂವರ್ಧಿಸಲಿ – ಹೊಂಬುಜ ಶ್ರೀಗಳು | hombuja


ಹೊಂಬುಜ : ಜೈನ ಪರಂಪರೆಯಲ್ಲಿ ಶ್ರುತಪಂಚಮಿ ಪರ್ವವು ಜೈನ ಧರ್ಮದ ಆಗಮ ಗ್ರಂಥಗಳ ಮಹತ್ವವನ್ನು ಸಾರುತ್ತದೆ. ಪ್ರಾಚೀನ ಜೈನಾಚಾರ ಗ್ರಂಥಗಳು ಆಧ್ಯಾತ್ಮಕ ಚಿಂತನೆಗೆ ರಚಿಸಲ್ಪಟ್ಟಿವೆ. ಶ್ರುತ ಎಂದರೆ ಕಿವಿಯಿಂದ ಕೇಳಿದ ದಿವ್ಯಧ್ವನಿಯ ಉಪದೇಶಗಳು ಕೃತಿ ರೂಪದಲ್ಲಿ ಧರ್ಮ ಆಚರಣೆಯ ದಾರಿದೀಪವಾಗಿ ಇಂದು ಧಾರ್ಮಿಕ ಮನೋಧರ್ಮ ಬೆಳೆಸಿಕೊಳ್ಳಲು ಪೂರಕವಾಗಿವೆ ಎಂದು ಹೊಂಬುಜ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರುತಪಂಚಮಿ ಪೂಜಾ ವಿಧಿಗಳ ಬಳಿಕ ಪ್ರವಚನದಲ್ಲಿ ತಿಳಿಸಿದರು. 

ಲಿಪಿ ರೂಪದಲ್ಲಿ ಜೈನ ಧರ್ಮ ಗ್ರಂಥಗಳು ಧವಳಾ-ಜಯಧವಳಾ-ಮಹಾಧವಳಾ ಅಪೂರ್ವ ಗ್ರಂಥಗಳಾಗಿದ್ದು, ಸಾಹಿತ್ಯ-ಭೂಗೋಳ-ಖಗೋಳ-ಜ್ಯೋತಿಷ್ಯ-ವಿಜ್ಞಾನ-ಗಣಿತ-ಚಿತ್ರಕಲೆ-ವೈದ್ಯ ವಿಜ್ಞಾನಗಳನ್ನು ಜ್ಞಾನಾಸಕ್ತರಿಗೆ ಪ್ರಕಟಿಸಲ್ಪಟ್ಟಿದೆ. ಜ್ಯೇಷ್ಠ ಶುಕ್ಲ ಪಂಚಮಿಯAದು ಲಿಪಿಬದ್ಧ ಜೈನಧರ್ಮ ಗ್ರಂಥಗಳು ಲೋಕಾರ್ಪಣೆಗೊಂಡ ಸ್ಮರಣೆಗಾಗಿ ಜಿನವಾಣಿ ಶ್ರೀ ಸರಸ್ವತಿ ದೇವಿ ಆರಾಧನೆ, ಶ್ರುತಸ್ಕಂದ ಪೂಜೆ ನೆರವೇರಿಸುವ ಪೂರ್ವ ಪರಂಪರೆಯ ಐತಿಹ್ಯವನ್ನು ಶ್ರೀಗಳು ವಿವರಿಸಿದರು. ಪ್ರತಿಯೋರ್ವರು ಸ್ವಾಧ್ಯಾಯ ಮಾಡುವುದರಿಂದ ಜ್ಞಾನ ಸಂಪತ್ತನ್ನು ವೃದ್ಧಿಸಿ ಜೀವನ ಮೌಲ್ಯಗಳನ್ನು ಧರ್ಮಪ್ರಜ್ಞೆಯಿಂದ ಸಂವರ್ಧಿಸಬೇಕು ಎಂದು ಹರಸಿದರು.


ಧರಸೇನ ಆಚಾರ್ಯರು ಭೂತಬಲಿ ಮತ್ತು ಪುಷ್ಪದಂತ ಮುನಿಶ್ರೀ ಶಿಷ್ಯರಿಗೆ ಜ್ಞಾನಾವೃತವನ್ನು ದಾರೆಎರೆದರು. ಹೀಗೆ ದ್ವಾದಶಾಂಗ ಧರ್ಮಗ್ರಂಥ ರಚನೆಯಾಯಿತು. ಆ ಸುದಿನವೇ ಜ್ಯೇಷ್ಠ ಶುಕ್ಲ ಪಂಚಮಿ ಆಗಿದ್ದರಿಂದ ಇಂದಿಗೂ ‘ಶ್ರುತಪಂಚಮಿ’ ಪರ್ವ ಆಚರಣೆಯಲ್ಲಿದೆ. ಷಟ್‌ಖಂಡಾಗಮ ಸೂತ್ರಗಳು ಆತ್ಮನ ಕರ್ಮಕ್ಷಯಕ್ಕೆ ಪೂರಕವಾಗಿದೆ ಎಂದರು. 

ಅತಿಶಯ ಶ್ರೀ ಕ್ಷೇತ್ರದಲ್ಲಿ ಶ್ರೀ ಸರಸ್ವತಿ ದೇವಿ ಆರಾಧನೆ, ಜಿನವಾಣಿ-ಶ್ರುತಸ್ಕಂದ ಪೂಜೆ, ಧವಳತ್ರಯ ಗ್ರಂಥಗಳ ಪಲ್ಲಕ್ಕಿ ಉತ್ಸವ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ವಿಶೇಷ ಅಲಂಕಾರ ಮಹಾಪೂಜೆಗಳು ಆರ್ಯಿಕಾಶ್ರೀ ಶಿವಮತಿ ಮಾತಾಜಿಯವರ ಹಾಗೂ ಸ್ವಸ್ತಿಶ್ರೀಗಳ ಸಾನಿಧ್ಯದಲ್ಲಿ ನೆರವೇರಿತು. 

ಹುಂಚ ಜೈನ ಸಮಾಜ, ಪದ್ಮಾವತಿ ಮಹಿಳಾ ಸಮಾಜ, ಊರ-ಪರವೂರ ಭಕ್ತಾದಿಗಳು ಶ್ರುತಪಂಚಮಿ ಪರ್ವದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *