ಫೇಸ್ಬುಕ್ ನಲ್ಲಿ ಪ್ರಾರಂಭವಾದ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ – ಆನ್ ಲೈನ್ ಪ್ರೇಮಿಗಳು ನೋಡಲೇಬೇಕಾದ ಸ್ಟೋರಿ
ಫೇಸ್ ಬುಕ್ ನಲ್ಲಿ ಆರಂಭವಾದ ಮಹಿಳೆ ಹಾಗೂ ಯುವಕನ ನಡುವಿನ ಲವ್ ಸ್ಟೋರಿ ಕೃಷ್ಣಾನದಿ ದಡದಲ್ಲಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಮೂಲದ ಮಮತಾ (48) ಕೊಲೆಯಾದ ಮಹಿಳೆ. ರೇವಣಸಿದ್ದಯ್ಯ (26) ಮಹಿಳೆಯನ್ನು ಕೊಂದ ಯುವಕ. ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ಮಮತಾಳಿಗೆ ಫೇಸ್ ಬುಕ್ ನಲ್ಲಿ ವಿಜಯಪುರ ಮೂಲದ ಯುವಕ ರೇವಣಸಿದ್ದಯ್ಯನ ಪರಿಚಯವಾಗಿದೆ.ಪರಿಚಯ, ಸ್ನೇಹವಾಗಿ ಪ್ರೀತಿಗೆ ತಿರುಗಿದೆ.
ಇಬ್ಬರ ನಡುವಿನ ಪ್ರೀತಿ-ಪ್ರೇಮದ ಸಲುಗೆಯಿಂದ ಯುವಕ ಮಹಿಳೆ ಮಮತಾಳಿಂದ ಹಣವನ್ನು ಪಡೆದಿದ್ದನಂತೆ. ಹಣ ಕೇಳಿದರೆ ರೇವಣಸಿದ್ದ ವಾಪಸ್ ಕೊಡದೇ ಜಗಳವಾಡಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಇದೇ ವಿಚಾರವಾಗಿ ಮನಸ್ತಾಪ ಆರಂಭವಾಗಿದೆ. ಅಲ್ಲದೇ ಇತ್ತಿಚೆಗೆ ಮಮತಾ, ರೇವಣಸಿದ್ದಯ್ಯನಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಳಂತೆ. ಮದುವೆ ಮಾತುಕತೆ ವಿಚಾರವಾಗಿ ರೇವಣಸಿದ್ದ ಪ್ಲಾನ್ ಮಾಡಿ ಮಮತಾಳನ್ನು ಬಬಲೇಶ್ವರಕ್ಕೆ ಕರೆಸಿಕೊಂಡಿದ್ದ.
ಬೀಳಗಿ ಬಳಿ ಕೃಷ್ಣಾನದಿ ಬಳಿ ಮಮತಾಳನ್ನು ಕರೆದೊಯ್ದು ರಾಡ್ ನಿಂದ ಆಕೆಯ ತಲೆಗೆ ಹೊಡೆದು ಹತ್ಯೆಗೈದು ಶವವನ್ನು ನದಿ ದಡದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಶಿವಮೊಗ್ಗ ಠಾಣೆಯಲ್ಲಿ ಮಮತಾ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೇ ವೇಳೆ ಬೀಳಗಿ ಬಳಿ ಕೃಷ್ಣಾನದಿ ದಡದಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ತನಿಖೆ ನಡೆಸಿ ಗುರುತು ಪತ್ತೆ ಮಾಡಿದ ಪೊಲೀಸರಿಗೆ ಶಿವಮೊಗ್ಗ ಮೂಲದ ಮಮತಾ ಎಂಬ ಮಹಿಳೆಯ ಶವ ಎಂಬುದು ಗೊತ್ತಾಗಿದೆ.
ಮಮತಾಳ ಮೊಬೈಲ್ ಮೂಲಕ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿ ರೇವಣಸಿದ್ದಯ್ಯನನ್ನು ಬಂಧಿಸಿದ್ದಾರೆ.