Shivamogga | ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆರ್ ಪ್ರಸನ್ನಕುಮಾರ್ ನೇಮಕ
ಶಿವಮೊಗ್ಗ : ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿದೆ. ಶಿವಮೊಗ್ಗ ಕಾಂಗ್ರೆಸ್‌ಗೆ ಆರ್.ಪ್ರಸನ್ನ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆ ಮೇರೆಗೆ ಆರ್.ಪ್ರಸನ್ನ ಕುಮಾರ್ ಅವರನ್ನು ಶಿವಮೊಗ್ಗದ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಈವರೆಗೂ ಹೆಚ್.ಎಸ್.ಸುಂದರೇಶ್ ಅವರು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಈಚೆಗೆ ಸುಂದರೇಶ್ ಅವರನ್ನು ಸೂಡ ಅಧ್ಯಕ್ಷರಾಗಿ ಸರ್ಕಾರ ನೇಮಿಸಿದ ಹಿನ್ನೆಲೆ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಾಗಿದೆ.
ಆರ್.ಪ್ರನಸ್ನ ಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿ ಜವಾಬ್ದಾರಿ ನಿಭಾಯಿಸಿದ್ದರು. ಈ ಹಿಂದೆ ಶಿವಮೊಗ್ಗ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಅನುಭವ ಕೂಡ ಹೊಂದಿದ್ದಾರೆ.