Ripponpete | ಆಟೋ ನಿಲ್ದಾಣ ತೆರವು, ರಸ್ತೆ ಅಗಲೀಕರಣ ಕಾಮಗಾರಿ ಬಿರುಸು
ರಿಪ್ಪನ್‌ಪೇಟೆ : ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ನಗರದ ತೀರ್ಥಹಳ್ಳಿ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ಹಾಗೂ ಆಟೋ ನಿಲ್ದಾಣದ ತೆರವು ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ.
ಪಟ್ಟಣದ ಹಳೇ ಚಿತ್ರಮಂದಿರದಿಂದ ವಿನಾಯಕ ವೃತ್ತದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತಿದ್ದು ತೀರ್ಥಹಳ್ಳಿ ರಸ್ತೆಯ ಬಲಬದಿಯ ಅಂಗಡಿ ಮುಂಗಟ್ಟುಗಳನ್ನು ಕಟ್ಟಡದ ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಗೆ ಕೈಜೋಡಿಸಿದ್ದಾರೆ.
ತೀರ್ಥಹಳ್ಳಿ ರಸ್ತೆಯಲ್ಲಿ ಆಟೋ ನಿಲ್ದಾಣ ತೆರವು ಹಿನ್ನಲೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಪಿಎಸ್‌ಐ ನಿಂಗರಾಜ್ ಕೆ ವೈ ಹಾಗೂ ಪಿಡಿಓ ಮಧುಸೂಧನ್ ಮಾತುಕತೆ ನಡೆಸಿ ಯಾವುದೇ ಗೊಂದಲವಿಲ್ಲದೇ ತೆರವು ಕಾರ್ಯಾಚರಣೆ ನಡೆದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಮುಂದಿನ ದಿನಗಳಲ್ಲಿ ಶಾಶ್ವತ ಆಟೊ ನಿಲ್ದಾಣ ನಿರ್ಮಿಸಿಕೊಡುವಂತೆ ಪಿಡಿಓ ಮಧುಸೂಧನ್ ಬಳಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರು ಬೇಡಿಕೆಯಿಟ್ಟಿದ್ದು ಸೂಕ್ತ ಸ್ಥಳದಲ್ಲಿ ಶಾಶ್ವತ ಆಟೋ ನಿಲ್ದಾಣ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ತೀರ್ಥಹಳ್ಳಿ ರಸ್ತೆಯ ಎಡಬದಿಯ ಅಂಗಡಿ ತೆರವು ಕಾರ್ಯಾಚರಣೆ ಮುಂದಾದಾಗ ಕಟ್ಟಡದ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು ಸಾಗರ ರಸ್ತೆಯ ಅನಧಿಕೃತ ಕಟ್ಟಡ ತೆರವುಗೊಳಿಸಿ ಬನ್ನಿ ನಾವೇ ಸ್ವಯಂ ತೆರವುಗೊಳಿಸಿ ಕೊಡುತ್ತೇವೆ ಎಂದು ಪಟ್ಟು ಹಿಡಿದಿರುವ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗು ಸಾಧ್ಯತೆ ಹೆಚ್ಚಾಗಿ ಕಾಣುತಿದ್ದು ಪಟ್ಟಣದ ಖಡಕ್ ಪಿಡಿಓ ಮಧುಸೂಧನ್ ಏನೂ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.