ವಾರಂಬಳ್ಳಿ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ | 7 ವರ್ಷದಿಂದ ಪ್ರಧಾನಿಗೆ 10 ಪತ್ರ ಬರೆದರೂ ಬಗೆಹರಿಯದ ಸಮಸ್ಯೆ
ತಮ್ಮೂರಿನ ಜನ ಸೂಕ್ತ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕು ಎಂದು ಪಣ ತೊಟ್ಟಿರುವ ಯುವಕನೊಬ್ಬ ಸ್ಥಳೀಯ ಅಧಿಕಾರಿಗಳಿಂದ ಹಿಡಿದು ಪ್ರಧಾನಮಂತ್ರಿಯವರೆಗೂ ಪತ್ರ ಬರೆದು ಸಂಬಂಧಪಟ್ಟವರನ್ನು ಬರೋಬ್ಬರಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಎಚ್ಚರಿಸುತ್ತಲೇ ಬಂದಿದ್ದಾನೆ. ಆದರೆ 10 ಬಾರಿ ಪ್ರಧಾನಿಗೆ ಪತ್ರ ಬರೆದರು ಆತನ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.
ಹೌದು, ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಬರುವ ವಾರಂಬಳ್ಳಿ ಗ್ರಾಮದ ಯುವಕ ವಿನಾಯಕ ಪ್ರಭು ಎಂಬಾತನೇ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ತಮ್ಮೂರಿನ ಜನ ಸೂಕ್ತ ರೀತಿಯ ಮೊಬೈಲ್ ನೆಟ್‌ವರ್ಕ್ ವ್ಯವಸ್ಥೆಯಿಲ್ಲದೇ ಪರದಾಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡಬೇಕೆಂದಾಗ ಇಲ್ಲಿನ ಜನರ ಸಮಸ್ಯೆ ಹೇಳತೀರದಾಗಿದೆ. ಮೊಬೈಲ್ ನೆಟ್‌ವರ್ಕ್ ಇಲ್ಲದೇ ಬೇಸರಗೊಂಡಿರುವ ಈ ಹುಡುಗ ತಮ್ಮೂರಿಗೆ ಮೊಬೈಲ್ ಟವರ್ ವ್ಯವಸ್ಥೆ ಕಲ್ಪಿಸಿಕೊಳ್ಳಲು ಕಳೆದ 7 ವರ್ಷಗಳಿಂದ ನಿರಂತರ ಹರಸಾಹಸ ಪಡುತ್ತಿದ್ದಾನೆ.
ತಮ್ಮೂರು ವಾರಂಬಳ್ಳಿಗೆ ನೆಟ್‌ವರ್ಕ್ ವ್ಯವಸ್ಥೆ ಮಾಡಿ ಎಂದು ವಿನಾಯಕ ಪ್ರಭು, ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿ ಬೇಸರಗೊಂಡು ಕೊನೆಗೆ ನೇರವಾಗಿ ಪ್ರಧಾನಿ ಕಚೇರಿಗೆ 2017ರ ಮೇ 13ರಂದು ಪತ್ರ ಬರೆದಿದ್ದ. ಪ್ರಧಾನಿ ಕಚೇರಿ ತಕ್ಷಣವೇ ಸ್ಪಂದಿಸಿ ಕೇಂದ್ರ ಸಾರ್ವಜನಿಕ ಕುಂದು ಕೊರತೆ ವಿಭಾಗದ ಮೂಲಕ ಶಿವಮೊಗ್ಗ ಶಾಖೆ ಬಿಎಸ್‌ಎನ್‌ಎಲ್ ಕಚೇರಿಗೆ ದೂರನ್ನು ರವಾನಿಸಿತ್ತು.
ಶಿವಮೊಗ್ಗ ಶಾಖೆಯ ಬಿಎಸ್‌ಎನ್‌ಎಲ್ ಅಧಿಕಾರಿಗಳು ಸಹ ಸ್ಪಂದಿಸಿ ವಿನಾಯಕ ಪ್ರಭುಗೆ ಮರಳಿ ಪತ್ರ ಬರೆದಿದ್ದರು. ಪತ್ರದಲ್ಲಿ ತಮ್ಮೂರಿಗೆ ಸಿಗ್ನಲ್ ವ್ಯಾಪಿಸುವಂತೆ ಮಾಡಲು ಪ್ರತ್ಯೇಕ ಟವರ್ ಹಾಕಬೇಕಿದ್ದು, ಪ್ರಾಧಿಕಾರದಿಂದ ಅನುಮೋದನೆ ಪಡೆದು ಆದಷ್ಟು ಬೇಗ ಟವರ್ ಹಾಕಲಾಗುವುದು ಎಂದು ವಿವರಿಸಿದ್ದರು. ಆದರೆ, ಹಲವು ವರ್ಷ ಕಳೆದರೂ ಅಧಿಕಾರಿಗಳು ಮತ್ತೆ ನಿರ್ಲಕ್ಷ್ಯ ಮುಂದುವರಿಸಿದ್ದು, ಪ್ರಧಾನಿಯವರ ಕಚೇರಿಯ ಸ್ಪಂದನೆಗೆ ಸೂಕ್ತ ಪ್ರತಿಸ್ಪಂದನೆ ಸಿಗದಂತಾಗಿದೆ.
ಕಳೆದ 7 ವರ್ಷಗಳ ನಿರಂತರ ಹೋರಾಟ ನಡೆಸಿದರೂ ತಮ್ಮ ಸಮಸ್ಯೆ ಮಾತ್ರ ಸಮಸ್ಯೆಯಾಗೆ ಉಳಿದಿರುವುದರಿಂದ ಬೇಸತ್ತ ಗ್ರಾಮಸ್ಥರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಇಂದು ಗ್ರಾಮದಲ್ಲಿ ಸೇರಿದ ಸಭೆಯಲ್ಲಿ ಗ್ರಾಮಸ್ಥರು ಚರ್ಚಿಸಿ ನಿರ್ಧಾರಕ್ಕೆ ಬಂದಿದ್ದಾರೆ.
ಈ ಸಭೆಯಲ್ಲಿ ಗ್ರಾಮದ ಪ್ರಮುಖರಾದ ಹರೀಶ್ ವಿ.ಟಿ, ಯೋಗೇಂದ್ರ ಹುಣಸೆಮಕ್ಕಿ, ಮಂಜುನಾಥ, ವಿನಾಯಕ ಪ್ರಭು ವಾರಂಬಳ್ಳಿ, ಕಮಲಾಕ್ಷಿ, ನಳಿನಿ, ರಮೇಶ, ಕೃಷ್ಣಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.