ಪ್ರಧಾನಿ ಮೋದಿ ವಿರುದ್ದ ಸೂಕ್ತ ಕ್ರಮಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ದೂರು – ಯಾಕೆ ಗೊತ್ತಾ..??? | Kimmane complaint for appropriate action against Modi
ಚುನಾವಣಾ ನೀತಿ ಸಂಹಿತೆಗೆ ವ್ಯತಿರಿಕ್ತವಾಗಿ ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಡಿವೈಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ.
ತಮ್ಮ ಲೆಟರ್ ಹೆಡ್‌ನಲ್ಲಿ ಅವರು ದೂರು ನೀಡಿದ್ದು, ಪತ್ರಿಕೆಯಲ್ಲಿ ಪ್ರಸಾರವಾದ ಆರ್ಟಿಕಲ್‌ವೊಂದನ್ನ ಉಲ್ಲೇಖಿಸಿ ದೂರು ನೀಡಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಪ್ರಸಾರ ಹೊಂದಿರುವ ಕನ್ನಡ ದೈನಿಕವೊಂದನ್ನು ಉಲ್ಲೇಖಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರು ಇವತ್ತಿನ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ ವರದಿ ಹಾಗೂ ಅದರಲ್ಲಿನ ಹೇಳಿಕೆಯನ್ನು ನಮೂದಿಸಿ ದೂರು ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆ ಸಮುದಾಯಗಳ ಮಧ್ಯೆ ದ್ವೇಷ, ಕೋಮುಭಾವನೆ ಕೆರಳಿಸುವ ಹೇಳಿಕೆಯಾಗಿದ್ದು, ರಾಜ್ಯ ದೇಶದ ಶಾಂತಿ ಸುವ್ಯವಸ್ಥೆ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂತಹ ಪ್ರಚೋದನಕಾರಿ ಹೇಳಿಕೆಯು ಪ್ರಧಾನಿ ಮೋದಿಯವರ ಹತಾಶೆ ಹಾಗೂ ಸೋಲಿನ ಭಯದಿಂದ ಕೂಡಿದ ಪ್ರತಿಕ್ರಿಯೆ ಆದರೂ ಸಹ ಇದು ಹಿಂದೂ ಮಹಿಳೆಯರ ಭಾವನಾತ್ಮಕ ವಿಚಾರಗಳನ್ನು ಕೆರಳಿಸುವ ಆ ಮೂಲಕ ಧರ್ಮ ಧರ್ಮಗಳ ಮಧ್ಯೆ ದ್ವೇಷ ಹರಡುವ ಹೇಳಿಕೆ ಆಗಿದ್ದು, ಆ ಮೂಲಕ ಮತ ಗಳಿಸುವ ವ್ಯವಸ್ಥಿತ ಒಳಸಂಚಾಗಿದೆ.
ಹೀಗಾಗಿ ಪತ್ರಿಕೆ ಸಂಪಾದಕ ಹಾಗೂ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹಾಗೂ ದ್ವೇಷ ಹರಡುವ ಪಿತೂರಿ ಕುರಿತಂತೆ ತಕ್ಷಣ ಕ್ರಮ ಜರುಗಿಸಬೇಕಾಗಿ ವಿನಂತಿಸುತ್ತೇನೆ. ಈ ದೂರಿನ ಜೊತೆ ಹೇಳಿಕೆ ಪ್ರಕಟವಾಗಿರುವ ಪತ್ರಿಕೆಯ ಸಂಚಿಕೆಯನ್ನು ಲಗತ್ತಿಸಿರುತ್ತೇನೆ ಎಂದು ವಿವರಿಸಿದ್ದಾರೆ.
ಅಲ್ಲದೆ ಸದರಿ ಹೇಳಿಕೆಯು ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ಪ್ರಧಾನಿಯವರ ಗೌಪ್ಯ ಪ್ರಮಾಣವಚನ ಮತ್ತು ಸಂಸತ್ ಸದಸ್ಯರ ಪ್ರಮಾಣವಚನಕ್ಕೆ ವಿರೋಧವಾಗಿರುತ್ತದೆ. ಭಾರತೀಯ ದಂಡ ಸಂಹಿತೆಯ ಅನ್ವಯ ಸದರಿ ಹೇಳಿಕೆ ಅಪರಾಧ ವಾಗಿರುವುದರಿಂದ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಈ ಮೂಲಕ ಆಗ್ರಹಿಸುತ್ತೇನೆ ಎಂದು ಕಿಮ್ಮನೆ ರತ್ನಾಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

