ತಮ್ಮನನ್ನು ರಕ್ಷಿಸಲು ಹೋದ ಅಣ್ಣನೂ ನೀರುಪಾಲು – ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವು | accident
ಭದ್ರಾ ಚಾನಲ್ ಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕುಂದಾಪುರದಿಂದ ಹೊಳೆಹೊನ್ನೂರಿನ ನೆಂಟರ ಮನೆಗೆ ಬಂದಾಗ ಈ ಅವಘಡ ಸಂಭವಿಸಿದೆ.
ಹೊಳೆಹೊನ್ನೂರು ಸಮೀಪದ ಗುಡಮಗಟ್ಟೆಯಲ್ಲಿರುವ ಭದ್ರಾ ಚಾನಲ್ ನಲ್ಲಿ ಘಟನೆ ಸಂಭವಿಸಿದ್ದು ಮೃತರನ್ನು ರಜತ್(10) ಹಾಗೂ ರೋಹನ್(15) ಎಂದು ಗುರುತಿಸಲಾಗಿದೆ. ಬಾಲಕರಿಬ್ಬರು ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದರು. ನಿನ್ನೆ ಸಂಜೆ ಇಬ್ಬರು ಭದ್ರಾ ಚಾನಲ್ ಏರಿ ಮೇಲೆ ಬಂದಾಗ ಇಬ್ಬರು ಬಾಲಕರ ಪೈಕಿ ಚಿಕ್ಕವನು ನೀರಿಗಿಳಿದಿದ್ದಾನೆ. ಆದರೆ ನೀರಿನ ಸೆಲೆಯಲ್ಲಿ ಆತ ಈಜಲಾಗದೇ ಮುಳಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಇನ್ನೊಬ್ಬನು ನೀರಿಗಿಳಿದಿದ್ದು, ಆತನೂ ಸಹ ಚಾನಲ್‌ನಲ್ಲಿ ಮುಳುಗಿದ್ದಾನೆ.
ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಟ್ಟೆ ಮಾತ್ರ ಪತ್ತೆಯಾಗಿದ್ದರಿಂದ ಪ್ರಕರಣ ಅನುಮಾನ ಸಹ ಮೂಡಿಸಿತ್ತು. ಆನಂತರ ರಾತ್ರಿ 9.30 ರ ಸುಮಾರಿಗೆ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವ ಮಹಜರ್ ನಡೆಸಿ ಪೋಷಕರಿಗೆ ಬಾಲಕರ ಮೃತದೇಹವನ್ನು ಒಪ್ಪಿಸಿದ್ದಾರೆ.