ಗೀತಾ ಶಿವರಾಜ್‌ಕುಮಾರ್ ರಾಜಕೀಯಕ್ಕೆ ಬಂದು ವರನಟ ರಾಜ್ ಕುಟುಂಬದ ಹೆಸರು ಹಾಳಾಗ್ತಿದೆ – ಹರತಾಳು ಹಾಲಪ್ಪ | ELECTION
ಡಾ. ರಾಜ್‌ಕುಮಾರ್ ಅವರಿಗೆ ನಾವೆಲ್ಲಾ ಗೌರವ ಕೊಡುತ್ತೇವೆ. ಇಲ್ಲಿ ಇರುವವರೆಲ್ಲಾ ಗೌರವ ಕೊಡುತ್ತೇವೆ. ಬಂಗಾರಪ್ಪ ಅವರನ್ನು ಸಹ ಅತ್ಯಂತ ಪುಣ್ಯಾತ್ಮ ಎಂದು ಸ್ಮರಿಸುತ್ತೇವೆ. 80ರ ದಶಕದಲ್ಲಿ ರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರಬೇಕು ಎಂದು ಹೋರಾಟಗಳು ನಡೆಯುತ್ತಿದ್ದವು.ಎ.ಕೆ ಸುಬ್ಬಯ್ಯ ಸೇರಿ ಎಲ್ಲರೂ ಕರೆದಿದ್ದರು.
ಆದರೆ ರಾಜ್‌ಕುಮಾರ್ ನಾನು ಮತ್ತು ನನ್ನ ಕುಟುಂಬ ಎಂದೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಇವರತ್ತು ಇವರು ರಾಜಕೀಯಕ್ಕೆ ಬಂದು ಆ ಕುಟುಂಬದ ಹೆಸರು ಹಾಳಾಗುತ್ತಿದೆ ಎಂದು ಬಿಜೆಪಿ ಮಾಜಿ ಶಾಸಕ ಹರತಾಳು ಹಾಲಪ್ಪ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಕೂಡ ಚುನಾವಣೆಗೆ ನಿಂತಿದ್ದರು. ಆ ಬಳಿಕ ಅವರನ್ನು ಕ್ಷೇತ್ರದಲ್ಲಿ ನೋಡಿಯೇ ಇಲ್ಲ. ನಾನಂತೂ ನೋಡಿಲ್ಲ. ನೀವು ನೋಡಿದ್ದೀರಾ. ಹಾಗಾಗಿ ರಾಜ್‌ಕುಮಾರ್ ಕುಟುಂಬಕ್ಕೆ ನಾವು ಗೌರವ ನೀಡುತ್ತೇವೆ, ಬಂಗಾರಪ್ಪ ಅವರ ಕುಟುಂಬಕ್ಕೆ ಗೌರವ ಕೊಡುತ್ತೇವೆ. ಆದರೆ ರಾಜಕೀಯವಾಗಿ ಆ ಅಭ್ಯರ್ಥಿಯನ್ನು ನಾವು ಬೆಂಬಲಿಸುವ ಪ್ರಶ್ನೆಯೇ ಇಲ್ಲ.. ಬೆಂಬಲಿಸಬಾರದು ಎಂದರು.
ಅವರನ್ನು ಗೆಲ್ಲಿಸಿದರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಹೀಗಾಗಿ ರಾಘವೇಂದ್ರ ಅವನ್ನು ಗೆಲ್ಲಿಸಿಕೊಳ್ಳೋಣ. ಕೆಲಸ ಮಾಡಿಸಿಕೊಳ್ಳೋಣ. ಕ್ಷೇತ್ರದ ಅಭಿವೃದ್ಧಿಯನ್ನು ಸಾಧಿಸೋಣ. ರಾಘಣ್ಣ ನಮ್ಮ ಹತ್ತಿರದ ಅಭ್ಯರ್ಥಿ, ಅವರು ಕೆಲಸ ಮಾಡಿಲ್ಲ ಎಂದರೆ ಅವರ ಮನೆಯ ಬಳಿ ಹೋಗಿ ಗಲಾಟೆ ಮಾಡಲು, ಕೂತು ಮಾತನಾಡಲು ಅವಕಾಶ ಇದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಭೇಟಿಯಾಗಲು ಸಾಧ್ಯವಿದೆಯೇ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮನೆಗೆ ಹೋಗಿ ನಮ್ಮ ಸಮಸ್ಯೆಗೆ ಪರಿಹಾರ ಕೇಳುವುದು ಹೇಗೆ. ದೊಡ್ಡ ಗೇಟ್ ಹಾಕಿರುತ್ತಾರೆ. ದೊಡ್ಡ ನಾಯಿಗಳನ್ನು ಬಿಟ್ಟಿರುತ್ತಾರೆ. ಈ ವಿಚಾರವನ್ನು ನಾನು ನೋಡಿದ್ದೇನೆ ಎಂದು ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ವಿರುದ್ಧ ವ್ಯಂಗ್ಯವಾಡಿದರು.

