Ripponpete | ಕಳಪೆ ಕಾಮಗಾರಿಗೆ ಸೇತುವೆಯ ಸೆಂಟ್ರಿಂಗ್ ಕುಸಿತ,ಏಳು ಕಾರ್ಮಿಕರಿಗೆ ಗಾಯ -ಪ್ರಕರಣ ಮುಚ್ಚಿ ಹಾಕಲು ಗುತ್ತಿಗೆದಾರನ ಹುನ್ನಾರ
ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಗ್ಗಲಿಜಡ್ಡು ಗ್ರಾಮದಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣ ಹಂತದಲ್ಲಿ ಸೇತುವೆಯ ಸೆಂಟ್ರಿಂಗ್ ಕುಸಿದು ಏಳು ಕಾರ್ಮಿಕರಿಗೆ ಗಾಯವಾಗಿರುವ ಘಟನೆ ನಡೆದಿದೆ.
ಕಗ್ಗಲಿಜೆಡ್ಡು ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 3.48 ಕೋಟಿ ರೂ ವೆಚ್ಚದಲ್ಲಿ ಸೇತುವೆ ಕಾಮಗಾರಿಯನ್ನು ಉಡುಪಿ ಮೂಲದ ಉದಯ್ ಕುಮಾರ್ ಶೆಟ್ಟಿ ಎಂಬಾತ ನಡೆಸುತಿದ್ದು ಈ ಸೇತುವೆಯ ಕಾಮಗಾರಿ ನಡೆಸುತಿದ್ದಾಗ ಸೋಮವಾರ ಸೆಂಟ್ರಿಂಗ್ ಕುಸಿದು ಹಲವು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಿಪ್ಪನ್‌ಪೇಟೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.
ಘಟನೆಯಲ್ಲಿ ಕಾರ್ಮಿಕರಾದ ಸೊರಬದ ಅರುಣ್ ಕುಮಾರ್(33) ಬಿಹಾರ ಮೂಲದ ದೀಪಕ್ ಕುಮಾರ್(22) ಕುಂದಾಪುರ ಮೂಲದ ಸುಧಾಕರ್(25) ಬಿಹಾರ ಮೂಲದ ಸುರಭ(19) ಬಿಹಾರ ಮೂಲದ ಸುಬೇಧ್ ಕುಮಾರ್ (25) ಬೈಂದೂರಿನ ಅಭಿಮನ್ಯು (28) ಮತ್ತು ಕುಂದಾಪುರ ಮೂಲದ ಸುರೇಂದ್ರ (27) ಗಾಯಗೊಂಡಿದ್ದಾರೆ.
ಸೋಮವಾರ ಸ್ಲ್ಯಾಬ್ ನಿರ್ಮಾಣದ ವೇಳೆ ನಡೆಯಿತು ದುರಂತ
ಸೋಮವಾರ ಸೆಂಟ್ರಿಂಗ್ ಕಾಮಗಾರಿಯೆಲ್ಲಾ ಮುಗಿಸಿ ಕಾಂಕ್ರೀಟ್ ಹಾಕುವ ವೇಳೆಯಲ್ಲಿ ತಳಭಾಗದ ಬೆಡ್ ಕುಸಿದು ಏಕಾಏಕಿ ಕುಸಿತ ಉಂಟಾಗಿದೆ. ಸುಮಾರು 10 ಕಾರ್ಮಿಕರು ಸ್ಲ್ಯಾಬ್ ಕೆಲಸದಲ್ಲಿ ನಿರತರಾಗಿದ್ದರು, ಈ ಸಂದರ್ಭ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.
ಗುತ್ತಿಗೆದಾರ ಈ ಘಟನೆಯನ್ನು ಮುಚ್ಚಿಹಾಕಲು ಹುನ್ನಾರ ನಡೆಸಿ ಸ್ಥಳದಲ್ಲಿದ್ದ ಸೆಂಟ್ರಿಂಗ್ ವಸ್ತುಗಳನ್ನು ಕೂಡಲೇ ತೆರವುಗೊಳಿಸಿ ಹಾಗೂ ಜಲ್ಲಿ ಮಿಕ್ಸ್ ಆಗಿದ್ದ ಕಾಂಕ್ರೀಟ್ ನ್ನು ಅಕ್ಕಪಕ್ಕ ಗ್ರಾಮದ ಹಲವರ ಮನೆ ಮುಂದೆ ಹಾಕಿದ್ದಾನೆ ಎಂದು ಸ್ಥಳಿಯರು ಹೇಳುತಿದ್ದಾರೆ.
ಗುತ್ತಿಗೆದಾರ ಉದಯ್ ಕುಮಾರ್ ಶೆಟ್ಟಿಯ ನಿರ್ಲಕ್ಷ್ಯಕ್ಕೆ ಹಲವಾರು ಬಡ ಕಾರ್ಮಿಕರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಉಂಟಾಗಿತ್ತು. ಸೇತುವೆ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ಗಳು,ಮೇಲೆ ಹತ್ತಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಬೆಲ್ಟ್ ಹೀಗೆ ಕೂಲಿ ಕಾರ್ಮಿಕರಿಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇದ್ದುದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಗುತ್ತಿಗೆದಾರ ಉದಯ್ ಶೆಟ್ಟಿ ಕಡಿಮೆ ಸಂಬಳ ಪಡೆಯುವ ಉತ್ತರ ಭಾರತದ ಕಾರ್ಮಿಕರನ್ನು ಈ ಕಾಮಗಾರಿಗೆ ಬಳಸಿಕೊಳ್ಳುತಿದ್ದಾನೆ. ದುರಂತದಲ್ಲಿ ಗಾಯಗೊಂಡವರಲ್ಲಿ ಮೂವರು ಉತ್ತರ ಭಾರತದವರೇ ಆಗಿದ್ದಾರೆ. ಅವರಲ್ಲಿ ಎಷ್ಟು ಜನರಿಗೆ ಕಾರ್ಮಿಕ ಕಾರ್ಡ್ ಇದೆ ಎಷ್ಟು ಜನರಿಗೆ ಇಲ್ಲ ಆ ದೇವರಿಗೆ ಗೊತ್ತು…??
ಉತ್ತರ ಪ್ರದೇಶ ಹಾಗೂ ಬಿಹಾರದಿಂದ ತುತ್ತು ಅನ್ನಕ್ಕಾಗಿ ವಲಸೆ ಬರುವ ಬಡ ಕಾರ್ಮಿಕರನ್ನು ಜೀತದಾಳುಗಳಂತೆ ಬಳಸಿಕೊಂಡು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಬಡಕಾರ್ಮಿಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಗುತ್ತಿಗೆದಾರ ಉದಯ್ ಕುಮಾರ್ ಶೆಟ್ಟಿಯ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.
ಒಟ್ಟಾರೆಯಾಗಿ ನಿರ್ಮಾಣದ ವೇಳೆಯಲ್ಲಿಯೇ ಈ ಸೇತುವೆಯ ತಳಭಾಗದ ಬೆಡ್ ಕುಸಿತವಾಗುತ್ತದೆ ಎಂದಾದರೆ ಈ ಕಾಮಗಾರಿ ಇನ್ನೇಷ್ಟೂ ಗುಣಮಟ್ಟದ್ದಾಗಿರಬೇಕು.ಉನ್ನತ ಮಾಹಿತಿಗಳ ಪ್ರಕಾರ ಗುತ್ತಿಗೆದಾರನಿಗೆ ಪ್ರಭಾವಿಗಳ ನಂಟಿದ್ದು ಈ ಪ್ರಕರಣವನ್ನು ಮುಚ್ಚಿಹಾಕಲು ಎಲ್ಲಾ ರೀತಿಯ ಪ್ರಯತ್ನ ನಡೆಸುತಿದ್ದಾನೆ ಎನ್ನಲಾಗುತ್ತಿದೆ..
ಜನ ಹಿತಕ್ಕಾಗಿ
ವಿಸೂ : ಹಣ ಕೊಟ್ಟು ಬಾಯಿ ಮುಚ್ಚಿಸಬಹುದಾದ ಕಾರ್ಪೋರೆಟ್ ಸ್ವಾಮ್ಯದ ಮೈನ್ ಸ್ಟ್ರೀಮ್ ಚಾನೆಲ್ ಗಳಿಗೂ… ಸ್ಥಳಿಯ ಓದುಗರು ಪ್ರೀತಿಯಿಂದ ಬೆಳೆಸಿರುವ ಪೋಸ್ಟ್ ಮ್ಯಾನ್ ನ್ಯೂಸ್ ಗೂ ಅಜಗಜಾಂತರ ವ್ಯತ್ಯಾಸವಿದೆ… ನಾವು ಮಾರಾಟಕ್ಕಿಲ್ಲ…..