5,8,9ನೇ ತರಗತಿ ಬೋರ್ಡ್ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ : ಸೋಮವಾರದಿಂದಲೇ ಪರೀಕ್ಷೆ ಆರಂಭ
5,8,9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆನಡೆಸಲು ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಮಾರ್ಚ್ 25 ರಿಂದಲೇ ಆರಂಭಗೊಳ್ಳಲಿದೆ.
5 ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 25 ರ ಸೋಮವಾರದಂದು ಪರೀಕ್ಷೆ ಆರಂಭಗೊಳ್ಳಲಿದೆ. ಮಾರ್ಚ್ 25 ರಂದು ಪರಿಸರ ಅಧ್ಯಯನ ಹಾಗೂ ಮಾರ್ಚ್ 26 ರಂದು ಗಣತಿ ಪರೀಕ್ಷೆ ನಡೆಯಲಿದೆ. ಇನ್ನು 8 ನೇ ತರಗತಿ ಮಾರ್ಚ್ 25 ರಂದು ತೃತೀಯ ಭಾಷೆ, ಮಾರ್ಚ್ 26 ರಂದು ಗಣಿತ, ಮಾರ್ಚ್ 27 ರಂದು ವಿಜ್ಞಾನ ಹಾಗೂ ಮಾರ್ಚ್ 28 ರಂದು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಇನ್ನು 9 ನೇ ತರಗತಿಗೆ ಕೂಡ ಮಾರ್ಚ್ 25 ರ ಸೋಮವಾರದಂದೇ ಪರೀಕ್ಷೆಗಳು ಪುನರರಾರಂಭಗೊಳ್ಳಲಿದೆ. ಮಾರ್ಚ್ 25 ರಂದು ತೃತೀಯ ಭಾಷೆ, ಮಾರ್ಚ್ 26 ರಂದು ಗಣತಿ, ಮಾರ್ಚ್ 27 ರಂದು ವಿಜ್ಞಾನ ಹಾಗೂ ಮಾರ್ಚ್ 28 ರಂದು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬೋರ್ಡ್ ಪರೀಕ್ಷೆ ಆರಂಭಗೊಂಡ ಬೆನ್ನಲ್ಲೇ ರುಪ್ಸಾ ಹೈಕೋರ್ಟ್ ಮೆಟ್ಟಿಲೇರಿ ಪರೀಕ್ಷೆಗೆ ತಡೆಯನ್ನು ತಂದಿತ್ತು.
ಆದರೆ ಶಿಕ್ಷಣ ಇಲಾಖೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮತ್ತೆ ಪರೀಕ್ಷೆ ನಡೆಸಲು ಅನುಮತಿಯನ್ನು ಪಡೆದುಕೊಂಡಿತ್ತು. ಆದರೆ ರುಪ್ಸಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಪರೀಕ್ಷೆಗೆ ತಡೆ ತಂದಿತ್ತು. ಆದ್ರೀಗ ಮತ್ತೆ ಹೈಕೋರ್ಟ್ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲೀಗ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ನಿತ್ಯವೂ ಒಂದೊಂದು ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಎರಡು ಬಾರಿ ಪರೀಕ್ಷೆ ರದ್ದಾಗಿದ್ದು, ಇದೀಗ ಎಲ್ಲಾ ಗೊಂದಲಗಳ ನಡುವಲ್ಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರೀಕ್ಷೆಗೆ ಸಜ್ಜಾಗಬೇಕಾಗಿದೆ. ಸೋಮವಾರದಿಂದಲೇ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಸತತವಾಗಿ ಪರೀಕ್ಷೆಗಳು ನಡೆಯಲಿದೆ. ರುಪ್ಸಾ ಹಾಗೂ ಶಿಕ್ಷಣ ಇಲಾಖೆಯ ತಿಕ್ಕಾಟಕ್ಕೆ ಈ ಬಾರಿ ವಿದ್ಯಾರ್ಥಿಗಳು ಗೊಂದಲದಲ್ಲಿಯೇ ಪರೀಕ್ಷೆ ಬರೆಯುವ ಸ್ಥಿತಿ ಬಂದೊದಗಿತ್ತು.