ಶಿವರಾಜ್ಕುಮಾರ್ ಸಿನಿಮಾಗಳನ್ನು ಬ್ಯಾನ್ ಮಾಡಲು ಆಗ್ರಹ – ಚುನಾವಣಾ ಆಯೋಗ ಹೇಳಿದ್ದೇನು..???
ನಟ ಶಿವರಾಜ್ಕುಮಾರ್ ಅವರ ಸಿನಿಮಾಗಳು ಮತ್ತು ಜಾಹೀರಾತುಗಳು ಖಾಸಗಿ ಟಿವಿ ಚಾನೆಲ್ಗಳಲ್ಲಿ ಪ್ರಸಾರವಾಗುವುದನ್ನು ನಿಷೇಧಿಸಲು ಸಾಧ್ಯವಿಲ್ಲ, ದೂರದರ್ಶನದಲ್ಲಿ ಮಾತ್ರ ಪ್ರಸಾರವನ್ನು ನಿರ್ಬಂಧಿಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ಕುಮಾರ್ ಅವರ ಧರ್ಮಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಶಿವರಾಜ್ಕುಮಾರ್ ಕೂಡ ತಮ್ಮ ಪತ್ನಿ ಪರವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಇದರ ನಡುವೆ ಚುನಾವಣೆ ಮುಗಿಯುವವರೆಗೂ ಶಿವರಾಜ್ಕುಮಾರ್ ಅವರ ಸಿನಿಮಾಗಳು ಮತ್ತು ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ತಡೆಯಬೇಕೆಂದು ಕೋರಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಯೋಗ ಉತ್ತರ ನೀಡಿದೆ.
ಚುನಾವಣಾ ಆಯೋಗ ಹೇಳಿದ್ದೇನು?
ಚುನಾವಣೆಯಲ್ಲಿ ಸ್ಪರ್ಧಿಸುವ ನಟರನ್ನು ಒಳಗೊಂಡಂತಹ ಚಲನಚಿತ್ರಗಳು ಮತ್ತು ಜಾಹೀರಾತುಗಳ ಪ್ರಸಾರವನ್ನು ಖಾಸಗಿ ಟಿವಿ ಚಾನೆಲ್‌ಗಳು ಅಥವಾ ಚಿತ್ರಮಂದಿರಗಳಲ್ಲಿ ನಿರ್ಬಂಧಿಸಲಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗದ ನಿರ್ದೇಶನವನ್ನು ರಾಜ್ಯ ಚುನಾವಣಾ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ದೂರದರ್ಶನದಲ್ಲಿ ಚಲನಚಿತ್ರಗಳ ಪ್ರಸಾರಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ.
ಅಂದಹಾಗೆ ಗೀತಾ ಶಿವರಾಜ್ಕುಮಾರ್ ಅವರಿಗೆ ಶಿವಮೊಗ್ಗ ಕ್ಷೇತ್ರದಲ್ಲಿ ಇದು ಎರಡನೇ ಪ್ರಯತ್ನವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸ್ಫರ್ಧಿಸಿ ಸೋಲುಂಡಿದ್ದರು. ಆದರೆ, ಈ ಬಾರಿ ಬಿಎಸ್ವೈ ಪುತ್ರ ರಾಘವೇಂದ್ರಗೆ ಗೀತಾ ಅವರು ಕಠಿಣ ಸ್ಪರ್ಧೆ ಕೊಡುವ ಸಾಧ್ಯತೆ ಇದೆ. ಏಕೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಮತ್ತು ತಮ್ಮ ಸಹೋದರ ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿದ್ದು, ಶಿವಮೊಗ್ಗ ಜಿಲ್ಲೆಯ ಉಸ್ತುವರಿಯು ಆಗಿದ್ದಾರೆ. ಹೀಗಾಗಿ ಈ ಬಾರಿ ಗೀತಾ ಅವರ ಗೆದ್ದರೆ ಅಚ್ಚರಿಪಡಬೇಕಿಲ್ಲ.