ಮಹಿಳೆಯನ್ನು ಕೊಲೆಗೈದು ಮೃತದೇಹಕ್ಕೆ ಬೇಲಿ ಕಂಬ ಕಟ್ಟಿ ಹುಂಚದ ಮುತ್ತಿನಕೆರೆಗೆ ಎಸೆದ ಹಂತಕರು – ವಾರಸುದಾರರ ಪತ್ತೆಗೆ ಪೊಲೀಸರ ಮನವಿ | Crime News

ಮಹಿಳೆಯನ್ನು ಕೊಲೆಗೈದು ಮೃತದೇಹಕ್ಕೆ ಬೇಲಿ ಕಂಬ ಕಟ್ಟಿ ಹುಂಚದ ಮುತ್ತಿನಕೆರೆಗೆ ಎಸೆದ ಹಂತಕರು – ವಾರಸುದಾರರ ಪತ್ತೆಗೆ ಪೊಲೀಸರ ಮನವಿ | Crime News

ಹೊಸನಗರ ತಾಲೂಕಿನ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಮಹಿಳೆಯೊಬ್ಬರನ್ನು ಕೊಲೆಗೈದು ಕುತ್ತಿಗೆ ಹಾಗೂ ಕಾಲನ್ನು ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿಹಾಕಿ ಹೊಟ್ಟೆಯ ಬಾಗಕ್ಕೆ ಬೇಲಿ ಕಂಬವನ್ನು ಕಟ್ಟಿ ನೀರಿಗೆ ಎಸೆದಿರುವ ಘಟನೆ ನಡೆದಿದೆ.


ಸೋಮವಾರ ಹುಂಚದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಹಾಗೂ ಇದು ಕೊಲೆಯೋ .? ಆತ್ಮಹತ್ಯೆಯೋ ಎಂಬ ಅಡಿಬರಹದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಪ್ರಕಟಿಸಿತ್ತು.

ಇದೀಗ ಈ ಘಟನೆಯ ಬಗ್ಗೆ ಪೊಲೀಸ್ ಪ್ರಕಟಣೆ ಹೊರಡಿಸಿದೆ.

ಪೊಲೀಸ್ ಪ್ರಕಟಣೆಯಲ್ಲಿ ಏನಿದೆ..???

ಹುಂಚಾ ಗ್ರಾಮದ ಮುತ್ತಿನ ಕೆರೆ ನೀರಿನಲ್ಲಿ ತೇಲುತಿದ್ದ ಮೃತದೇಹವನ್ನು ನೀರಿನಿಂದ ಹೊರತೆಗೆದು ನೋಡಿದಾಗ ಸುಮಾರು 45 ರಿಂದ 50 ವರ್ಷ ಪ್ರಾಯದ ಅನಾಮಧೇಯ ಹೆಂಗಸಾಗಿದ್ದು, ಶವಕ್ಕೆ ಅರಿಶಿಣ ಬಣ್ಣದ ಪ್ಲಾಸ್ಟಿಕ್ ಹಗ್ಗದಿಂದ ಕುತ್ತಿಗೆ ಮತ್ತು ತೊಡೆಯ ಭಾಗಕ್ಕೆ ಮತ್ತು ಎರಡೂ ಕಾಲಿಗೆ ಬಿಗಿಯಾಗಿ ಕಟ್ಟಿ,ಹೊಟ್ಟೆಯ ಭಾಗದಲ್ಲಿ ಸುಮಾರು 3-1/2 ಅಡಿ ಉದ್ದದ ಕಲ್ಲಿನ ಬೇಲಿ ಕಂಬದ ತುಂಡನ್ನು ಕಟ್ಟಿ,ಯಾವುದೋ ಉದ್ದೇಶದಿಂದ,ಎಲ್ಲಿಯೋ ಕೊಲೆ ಮಾಡಿ, ಕೊಲೆಯನ್ನು ಮರೆಮಾಚುವ ದುರುದ್ದೇಶದಿಂದ ಹುಂಚಾ ಗ್ರಾಮದ ಮುತ್ತಿನ ಕೆರೆ ನೀರಿಗೆ ತಂದು ಹಾಕಿದ್ದು ಕಂಡು ಬಂದಿರುತ್ತದೆ.ಮೃತ ದೇಹವನ್ನು ಮೂರು ನಾಲ್ಕು ದಿನ ಹಿಂದೆ ಕೊಲೆ ಮಾಡಿ ನೀರಿಗೆ ಹಾಕಿರಬಹುದಾಗಿದ್ದು, ಕೊಳೆತ ಸ್ಥಿತಿಯಲ್ಲಿರುತ್ತದೆ. ಮೃತ ಅನಾಮಧೇಯ ಹೆಂಗಸಿನ ವಾರಸು ದಾರರು ಮತ್ತು ಕೊಲೆ ಮಾಡಿದ ಆರೋಪಿತರ ಪತ್ತೆಗೆ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ38/2024ಕಲಂ:302,201 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.


ಸುಮಾರು 45 ರಿಂದ 50 ವರ್ಷ ಪ್ರಾಯ,5.2 ಅಡಿ ಉದ್ದ,ಕಪ್ಪು ಮೈಬಣ್ಣ, ದುಂಡು ಮುಖ,ದಪ್ಪ ಶರೀರ, 8 ಇಂಚು ಉದ್ದದ ನೀಳವಾದ ಕಪ್ಪು,ಕೆಂಪು ಮತ್ತು ಬಿಳಿ ತಲೆಕೂದಲು,ಕುತ್ತಿಗೆಯಲ್ಲಿ 7 ಕೀಗಳಿರುವ ಒಂದು ಬಿಳಿಬಣ್ಣದ ದಾರ.ಕಿವಿಯಲ್ಲಿ ಬಂಗಾರದಂತಿರುವ ಬಿಳಿ ಹರಳಿನ ಕಿವಿಓಲೆ,ಎಡ ಮೂಗಿನಲ್ಲಿ ಚಿಕ್ಕ ಮೂಗುತಿ ಧರಿಸಿದ್ದು, ಹಸಿರು ಬಣ್ಣದ ರವಿಕೆ,ತಿಳಿಗುಲಾಬಿ ಬಣ್ಣದ ಸೀರೆ,ಗಿಳಿ ಹಸಿರು ಬಣ್ಣದ ಒಳಲಂಗ ಧರಿಸಿರುತ್ತಾಳೆ.

ಮೃತದೇಹದ ಜೊತೆಗೆ ಕೆಂಪು ಬಣ್ಣದ ಎಲೆ ಅಡಿಕೆ ಚೀಲ ದೊರೆತಿದ್ದು,ಅದರಲ್ಲಿ ಬಂಗಾರದಂತಿರುವ ಎರಡು ತಾಳಿ, ಒಂದು ಜೊತೆ ಕಿವಿಓಲೆ ಮತ್ತು ಪಾಣಿ, ಬಂಗಾರದಂತಿರುವ ಒಂದು ಸಣ್ಣ ಉಂಗುರ ಇರುತ್ತದೆ. 


ಮೃತ ಅನಾಮಧೇಯ ಹೆಂಗಸಿನ ಸುಳಿವು ದೊರೆತಲ್ಲಿ ಈ ಕೆಳಗಿನ ಅಧಿಕಾರಿಯವರಿಗೆ ಮುಖತಃ ಅಥವಾ ದೂರವಾಣಿ ಮೂಲಕ ಸಂಪರ್ಕಿಸಲು ಕೋರಲಾಗಿದೆ.

1) ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ- 08181-220388

2) ಪೊಲೀಸ್ ನಿರೀಕ್ಷಕರು, ಹೊಸನಗರ ವೃತ್ತ.-08185-221544.  ಮೊಬೈಲ್ ನಂಬರ್ 9480803337

3) ಪೊಲೀಸ್ ಉಪ ನಿರೀಕ್ಷಕರು, ರಿಪ್ಪನ್ ಪೇಟೆ ಪೊಲೀಸ್ ಠಾಣೆ-08185-242635.ಮೊಬೈಲ್ ನಂಬರ್ 9480803365

Leave a Reply

Your email address will not be published. Required fields are marked *