ರಿಪ್ಪನ್‌ಪೇಟೆ : ಪ್ರಸಕ್ತ ಕಾಲದಲ್ಲಿ ದೇಶದಲ್ಲಿ ಮೋದಿಯಿಂದ ಅಭಿವೃದ್ದಿಯ ಪರ್ವ ನಡೆಯುತಿದ್ದು ಮತದಾರರು ದೇಶದ ಹಿತದೃಷ್ಠಿಯಿಂದ ಆತ್ಮಾವಲೋಕನ ಮಾಡಿಕೊಂಡು ಮೋದಿಗೆ ಮತ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
ಪಟ್ಟಣದ ಸತ್ಕಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಮತದಾರರ ಆಶೀರ್ವಾದದಿಂದ ಮೂರು ಬಾರಿ ಸಂಸತ್ ಸದಸ್ಯನಾಗಿ ಆಯ್ಕೆ ಆಗಿದ್ದು ಜನಮೆಚ್ಚುವ ಆಭಿವೃದ್ದಿ ಕೆಲಸಗಳಿಗಾಗಿ ಸರ್ಕಾರದ ಹಿರಿಯರಿಂದಲೂ ಪ್ರಶಂಸೆಯನ್ನು ಪಡೆದುಕೊಂಡಿದ್ದೇನೆ. ಕ್ಷೇತ್ರದಾದ್ಯಂತ ಸಾಕಷ್ಟು ಜನಪರವಾದಂತಹ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆನುದಾನವನ್ನು ತರುವುದರೊಂದಿಗೆ ಸಂಪರ್ಕ ರಸ್ತೆ, ಮೆಡಿಕಲ್ ಕಾಲೇಜ್, ಕೃಷಿ, ತೋಟಗಾರಿಕಾ ಕಾಲೇಜ್, ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಆಕಾಶವಾಣಿ, ಸರ್ವಋತು ಜೋಗ್ ಅಭಿವೃದ್ದಿ ಹಾಗೂ ತುಮರಿ ಸಂಪರ್ಕದ ಸೇತುವೆ ನಿರ್ಮಾಣ ಕಾಮಗಾರಿಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರದಿಂದ 20 ಸಾವಿರ ಕೋಟಿ ರೂ. ಅನುದಾನವನ್ನು ತಂದಿರುವ ತೃಪ್ತಿ ಇದೆ ಎಂದರು.
ಕೊಲ್ಲೂರಿಗೆ ಹೊಸನಗರದಿಂದ ಅಡಗೋಡಿ ತಿರುವು ರಹಿತ ರಸ್ತೆ ಸೇತುವೆ, ಕೊಡಚಾದ್ರಿಗೆ ರೋಪ್‌ವೇ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಹಾಗೆಯೇ ಮೇಗರವಳ್ಳಿಯಿಂದ ಮಣಿಪಾಲದವರಗೆ 12 ಕೋಟಿ ರೂ. ವೆಚ್ಚದ ಸುರಂಗ ಮಾರ್ಗ ಕಾಮಗಾರಿಗೆ ಯೋಜನಾ ವರದಿ ನೀಡಲಾಗಿದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಕೇವಲ ಒಂದೇ ವಾರದಲ್ಲಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ತಾಯಿ ಮೈತ್ರಾದೇವಿಯನ್ನು ನೆನಪಿಸಿಕೊಂಡ ಸಂಸದರು ನಾನು ಬೇಗ ನಮ್ಮ ತಾಯಿಯನ್ನು ಕಳೆದುಕೊಂಡಿದ್ದು ಅವರನ್ನು ನಿಮ್ಮಲ್ಲಿ ಕಾಣುತಿದ್ದೇನೆ ಎಂದು ಭಾವುಕರಾಗಿ ನುಡಿದರು ಈ ಸಂಧರ್ಭದಲ್ಲಿ ನೆರೆದಿದ್ದ ಮಹಿಳೆಯರು ಬಿವೈ ಆರ್ ಗೆ ಜಯಕಾರ ಕೂಗಿದರು.
ಇದೇ ಸಂಧರ್ಭದಲ್ಲಿ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಯಡಿಯೂರಪ್ಪ ರವರ ಮೇಲೆ ನಡೆದ ಹಲ್ಲೆ ಘಟನೆಯನ್ನು ವಿವರಿಸಿ ಯಡಿಯೂರಪ್ಪ ಯಾರಿಗೂ ಹೆದರುವ ವ್ಯಕ್ತಿಯಲ್ಲ ಎಂದರು.
ಬಿಜೆಪಿ ಮಹಿಳೆ ರಾಜ್ಯಾಧ್ಯಕ್ಷ ಮಂಜುಳಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಎಲ್ಲಾ ಕ್ಷೇತ್ರದಲ್ಲಿಯೂ ವಿಫಲವಾಗಿದ್ದು ಕಾನೂನು ಸುವ್ಯವಸ್ಥೆಯನ್ನು ಪುಂಡರ ಕೈಯಲ್ಲಿ ಅಡವಿಟ್ಟಿದೆ ಅಡುಗೆ ಮನೆಯಿಂದ ಕುಟುಂಬವನ್ನು ಮೆಚ್ಚಿಸಿದ ಮಹಿಳೆಯರು ಈಗ ದೇಶವನ್ನು ಗೆಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರವರನ್ನು ವಿರೋಧ ಪಕ್ಷದವರು ಮೆರಿಟ್ ಮೇಲೆ ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಕಾಂಗ್ರೆಸ್ ಏಜೆಂಟರು ಚುನಾವಣೆಯನ್ನು ಸುಳ್ಳು ವಾಮಮಾರ್ಗದಿಂದ ಗೆಲ್ಲುವ ಹುನ್ನಾರ ಮಾಡುತ್ತಿದ್ದಾರೆ. ಭವಿಷ್ಯದ ಭಾರತ ನಾರಿಶಕ್ತಿಯ ಮೂಲಕ ಮುನ್ನೆಡೆಯುವುದಿದೆ. ಇದನ್ನು ಸಾಕಾರಗೊಳಿಸಬೇಕಾದರೆ ಪ್ರತಿ ಮಹಿಳೆಯರು ಮತದಾರರನ್ನು ಸಂಪರ್ಕಿಸಿ ಬಿಜೆಪಿಯನ್ನು ಬೆಂಬಲಿಸುವಂತೆ ಮನಃಪರಿವರ್ತನೆ ಮಾಡಿ ಪಕ್ಷಕ್ಕೆ ಮತ ಕೊಡಿಸಬೇಕೆಂದರು.
ಸಮಾವೇಶದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ, ಮಹಿಳಾ ಅಧ್ಯಕ್ಷೆ ಆಶಾ ರವೀಂದ್ರ, ಮುಖಂಡರಾದ ವೀಣಾಶೆಟ್ಟಿ, ಜೆಡಿಎಸ್ ಮುಖಂಡರಾದ ಆರ್.ಎ.ಚಾಬುಸಾಬ್, ಎನ್ ವರ್ತೇಶ್, ಜಿ.ಎಸ್.ವರದರಾಜ್, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಸರಸ್ವತಿ, ಲೀಲಾ ಉಮಾಶಂಕರ್, ರೇಖಾ ರವಿ, ಪದ್ಮಾ ಸುರೇಶ್, ಗಣಪತಿ ಬಿಳಗೋಡು ಇನ್ನಿತರರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.