ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು | ಪ್ರಕರಣದ ಬಗ್ಗೆ ಬಿಎಸ್ವೈ ಹೇಳಿದ್ದೇನು..??
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಫೋಕ್ಸೋ ಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(a) ಅಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆಬ್ರುವರಿ 2ರಂದು ಸಹಾಯ ಕೇಳಲು ಹೋಗಿದ್ದ ವೇಳೆ ಯಡಿಯೂರಪ್ಪ ಅವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಪೋಕ್ಸೋ ಪ್ರಕರಣದಲ್ಲಿ ದಾಖಲಾದರೆ, ಆರೋಪಿ ಎಷ್ಟೇ ಪ್ರಭಾವಿ ಆಗಿದ್ದರೂ ಕೂಡಲೇ ಬಂಧಿಸಬೇಕು. ನಂತರ ತನಿಖೆ ನಡೆಸಬೇಕೆಂದು ಕಾನೂನಿನಲ್ಲಿ ಹೇಳಿರುವುದಾಗಿ ತಜ್ಞರು ಹೇಳುತ್ತಾರೆ. ಹೀಗಾಗಿ, ಯಡಿಯೂರಪ್ಪ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಬಿಎಸ್ವೈ ವಿರುದ್ಧ ಪೋಕ್ಸೋ ಪ್ರಕರಣ ಆರೋಪಕ್ಕೆ ಯಡಿಯೂರಪ್ಪ ಹೇಳಿದ್ದೇನು..?
ನನ್ನ ಮೇಲೆ ಯಾರೋ ಒಬ್ಬ ಹೆಣ್ಣು ಮಗಳು ಕಂಪ್ಲೇಟ್ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಯಾರೋ ತಾಯಿ ಮಗಳು ಒಂದು ತಿಂಗಳ ಹಿಂದೆ ನನ್ನ ಹತ್ತಿರ ಬಂದಿದ್ರು. ಅವರು ಅತ್ತು ನನಗೆ ಅನ್ಯಾಯ ಆಗಿದೆ ಅಂತ ಹೇಳಿದ್ರು. ನಾನು ಪೊಲೀಸ್ ರಿಗೆ ಹೇಳಿಕೆ ನೀಡಿ ವಿಚಾರಿಸಲು ಹೇಳಿದ್ದೆ, ಆದರೆ ಈಗ ನನ್ನ ಮೇಲೆಯೇ ಆರೋಪ ಮಾಡಿದ್ದಾರೆ ಎಂದರು.
ಒಬ್ರಿಗೆ ಉಪಕಾರ ಮಾಡೋಕೆ ಹೋಗಿ ಹಿಂಗ್ ಆಗಿದೆ. ಆಗ ಸ್ವಲ್ಪ ದುಡ್ಡು ಕೊಟ್ಟು ಕಳುಹಿಸಿದ್ದೆ. ಲೋಕಸಭಾ ಚುನಾವಣೆಗೆ ನಮಗೆ ಒಳ್ಳೆಯ ವಾತಾವರಣ ಇದೆ. 28ಕ್ಕೆ ಕನಿಷ್ಠ 26,27 ಸೀಟ್ ಗೆದ್ದೇ ಗೆಲ್ತೀವಿ. ರಾಜ್ಯ ಪ್ರವಾಸಿ ಮಾಡಿ ಹೆಚ್ಚಿನ ಸೀಟ್ ಗೆಲ್ಲುತ್ತೇವೆ.
ಪ್ರಧಾನಿ ಮೋದಿಯ ಜನಪ್ರಿಯತೆ ಇರುವ ವಾತಾವರಣ ರಾಜ್ಯದಲ್ಲಿಇದೆ. ನಾನು ಈ ಕಂಪ್ಲೆಂಟ್ ಬಗ್ಗೆ ಹೆಚ್ಚೇನು ಮಾತನಾಡೊಲ್ಲ. ಇದು ರಾಜಕೀಯ ಪ್ರೇರಿತ ಎನ್ನುವ ಪ್ರಶ್ನೆಗೆ ಬಿಎಸ್ವೈ ಮುಗುಳ್ನಕ್ಕಿದ್ದಾರೆ. ಈಶ್ವರಪ್ಪ ನವರ ಮನವೊಲಿಸುತ್ತೇವೆ. ಅವರು ನಮ್ಮ ಜೊತೆಗೇ ಇರ್ತಾರೆ. ಶೆಟ್ಟರ್ ಗೆ ಕನ್ವೆನ್ಸ್ ಮಾಡಿ ಬೆಳಗಾವಿಯಿಂದ ನಿಲ್ಲಿ ಅಂತ ಹೇಳಿದ್ದೇನೆ ಎಂದು ಹೇಳಿದರು.