Ripponpete | ಪ್ರತಿಯೊಬ್ಬರೂ ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು – ಧನಲಕ್ಷ್ಮಿ ಗಂಗಾಧರ್
ರಿಪ್ಪನ್‌ಪೇಟೆ : ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕಿನೊಂದಿಗೆ ಜೀವನ ನಡೆಸಲು ಅನುವು ಮಾಡಿಕೊಟ್ಟ ಪವಿತ್ರ ಗ್ರಂಥವಾಗಿದೆ. ಸಂವಿಧಾನದಿಂದ ಇಂದು ದೇಶ ಪ್ರಗತಿ ಕಾಣುವಂತಾಗಿದೆ. ಪ್ರತಿಯೊಬ್ಬರೂ ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು.
ಸೋಮವಾರ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯ ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದರು.
ನಂತರ ಮಾತನಾಡಿದ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಸಂವಿಧಾನದ ಧ್ಯೇಯೋದ್ದೇಶಗಳು ಜಿಲ್ಲೆಯ ಮನೆ ಮನೆಗೆ ತಲುಪಿಸುವ ಸದುದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ.ಸಂವಿಧಾನ ಪೀಠಿಕೆಯನ್ನು ಜನಸಾಮಾನ್ಯರಿಗೆ ಅರ್ಥೈಸಬೇಕು. ಈ ಮೂಲಕ ಜನಸಾಮಾನ್ಯರು ಸಹ ಸಂವಿಧಾನವನ್ನು ಅರಿತು ತಮ್ಮ ಹಕ್ಕು ಕರ್ತವ್ಯಗಳನ್ನು ಪಾಲಿಸಬೇಕು. ಸಂವಿಧಾನ ದತ್ತವಾಗಿ ಇರುವ ಹಕ್ಕುಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಜನ ಸಾಮಾನ್ಯರೆಲ್ಲರೂ ಒಂದು ಎಂಬ ಭ್ರಾತೃತ್ವ ಭಾವನೆ ಮೂಡಿಸುವ ಆಶಯವನ್ನು ಸಂವಿಧಾನ ಜಾಗೃತಿ ಕಾರ್ಯಕ್ರಮ ಒಳಗೊಂಡಿದೆ ಎಂದರು.
ಕಾರ್ಯಕ್ರಮ ಚಾಲನೆಗು ಮುನ್ನ ಗ್ರಾಮದ ಜನರು ಹಲವು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಗ್ರಾಮದ ಜನರು ಜಾಥವನ್ನು ಬರಮಾಡಿಕೊಂಡರು.
ಈ ಸಂಧರ್ಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ವೈ ನರೇಂದ್ರ ,ಗ್ರಾಪಂ ಸದಸ್ಯರುಗಳು, ಪಿಡಿಓ ಮಧುಸೂಧನ್ ,ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇನ್ನಿತರರಿದ್ದರು.