Ripponpete | ಅಡಿಕೆ ಅಡಮಾನ ಸಾಲ ಯೋಜನೆಯನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು – ಆರ್ ಎಂ ಮಂಜುನಾಥ್ ಗೌಡ
ರಿಪ್ಪನ್ ಪೇಟೆ : ಅಡಿಕೆ ಅಡಮಾನ ಸಾಲ ಯೋಜನೆಯನ್ನು ಉತ್ತಮ ರೀತಿಯಲ್ಲಿ ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಹೇಳಿದರು.
ಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಡಿಕೆ ಅಡಮಾನ ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿ ಅಡಿಕೆಯ ದರ ಏರಿಳಿತವಾಗುತ್ತಿರುತ್ತದೆ ಅದರಿಂದ ಕೆಲವೊಮ್ಮೆ ಸಣ್ಣ ರೈತರು ಕಡಿಮೆ ಬೆಲೆಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಿ ಸಂಕಷ್ಟಕ್ಕೀಡಾಗುತ್ತಾರೆ ಇಂತಹ ರೈತರಿಗೆ ಆರ್ಥಿಕ ಶಕ್ತಿ ತುಂಬುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.ಈ ಕೇಂದ್ರಗಳಲ್ಲಿ ತಮ್ಮ ಅಡಿಕೆ ಬೆಳೆಯನ್ನು ಅಡಮಾನ ಇಟ್ಟು ಮುಂದಿನ ದಿನಗಳಲ್ಲಿ ಒಳ್ಳೆಯ ಬೆಲೆಗೆ ತಮ್ಮ ಬೆಳೆಯನ್ನು ಮಾರಾಟ ಮಾಡಿ ಹೆಚ್ಚು ಲಾಭ ಗಳಿಸಬಹುದಾಗಿದೆ ಎಂದರು.
ರೈತರಿಗೆ ಅನುಕೂಲವಾಗುವಂತ ಇಂತಹ ಯೋಜನೆಯನ್ನು ಪ್ರಾರಂಭಗೊಳಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಎಂ ಪರಮೇಶ್ ಹಾಗೂ ಆಡಳಿತ ಮಂಡಳಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಂ. ಎಂ. ಪರಮೇಶ್, ಉಪಾಧ್ಯಕ್ಷರಾದ ಎನ್‌ಪಿ ರಾಜು,ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಬಿ ಲಕ್ಷಣ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಂಡಿ ರಾಮಚಂದ್ರ, ಎ.ಟಿ ನಾಗರತ್ನಮ್ಮ ಹಾಗೂ ಇನ್ನಿತರರಿದ್ದರು.