ಕೋರಂ ಕೊರತೆ – ಹುಂಚ ಗ್ರಾಮ ಪಂಚಾಯತಿಯ ಗ್ರಾಮಸಭೆ ಮುಂದೂಡಿಕೆ
ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮಸ್ಥರು (ಕೋರಂ) ಇಲ್ಲದೆ ಗ್ರಾಮ ಸಭೆ ಮುಂದೂಡಿಕೆಯಾಗಿದೆ. 2023-24 ನೇ ಸಾಲಿನ ಪ್ರಥಮ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆ ಇದಾಗಿದ್ದು ಗ್ರಾಮಸ್ಥರ ಹಾಜರಿ ಕಡಿಮೆ ಇದ್ದ ಕಾರಣ ಸಭೆ ಮುಂದೂಡಿಕೆಯಾಗಿದೆ.
ಪಂಚಾಯತ್ ಅಧ್ಯಕ್ಷೆ ಸುಮಂಗಳ ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆ ಬೆಳಗ್ಗೆ 11-30 ಕ್ಕೆ ಪ್ರಾರಂಭವಾಗಿದ್ದು, ಆರಂಭದಲ್ಲಿ ಬೆರೆಳೆಣಿಕೆಯಷ್ಟು ಜನರಿದ್ದರು.
ಕೋರಂ ಇಲ್ಲದೆ ಸಭೆ ನಡೆಸುವಂತಿಲ್ಲ ಎಂದು ಗ್ರಾಮಸ್ಥರಾದ ಉಲ್ಲಾಸ್ ಭಟ್ ,ಈರನಬೈಲ್ ಸತೀಶ್ ,ಕಿರಣ್ ಬಿ ಡಿ , ಗುರುರಾಜ್ ಭಂಡಾರಿ ,ರಾಘ , ಸಣ್ಣಕಲ್ ಗುರು ಮೊದಲಾದವರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಪಂ ಪಿಡಿಓ ರಮೇಶ್ ಗ್ರಾಮ ಸಭೆಯ ಕುರಿತು ಸಾಕಷ್ಟು ಪ್ರಚಾರ ನೀಡಲಾಗಿದ್ದು, ಜನರು ಭಾಗಿಯಾಗುತ್ತಿಲ್ಲ. 12.30 ರವರೆಗೆ ಕಾದು ನೋಡುವ ಆದಾಗ್ಯೂ ಜನ ಸೇರದಿದ್ದಲ್ಲಿ ಸಭೆ ಮುಂದೂಡುವ ಎಂದು ವಿನಂತಿಸಿದರು.
ಕಾಟಾಚಾರಕ್ಕಾಗಿ ಗ್ರಾಮ ಸಭೆಯೇ ?
ಒಂದು ಗಂಟೆಯ ಬಳಿಕ ಕೆಲವು ಮಂದಿ ಗ್ರಾಮಸ್ಥರು ಸಭೆಯಲ್ಲಿ ಭಾಗಿಯಾದರು. ಆದರೆ ಸಾಕಷ್ಟು ಜನ ಗ್ರಾಮಸ್ಥರಿಲ್ಲದೆ ಗ್ರಾಮ ಸಭೆ ನಡೆಸಲಾಗುವುದಿಲ್ಲ, ಕಾಟಚಾರಕ್ಕಾಗಿ ಗ್ರಾಮ ಸಭೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಗ್ರಾಮಸ್ಥರು ಜನರಿಗೆ ನಿಜವಾಗಿ ಮಾಹಿತಿ ಕೊಡುವ ಉದ್ದೇಶದಿಂದ ಗ್ರಾಮ ಸಭೆ ಮಾಡುತ್ತೀದ್ದೀರಿ ಎಂದಾದರೆ ಸಭೆಯನ್ನು ಮುಂದೂಡಿ ಎಂದು ಆಗ್ರಹಿಸಿದರು.
ಇನ್ನು ಕೆಲವರು ನಾವು ಕೆಲಸ ಬಿಟ್ಟು ಬಂದಿದ್ದೇವೆ ಹೀಗೆ ಸಭೆ ಮುಂದೂಡುವುದಾದರೆ ನಮ್ಮ ದಿನ ಕೂಲಿಯನ್ನು ನೀಡಿ ಎಂದು ಆಕ್ರೋಶ ಹೊರ ಹಾಕಿದರು.
ನಂತರ ಕೋರಂ ಕೊರತೆಯ ಹಿನ್ನಲೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆಯನ್ನು ಮುಂದೂಡಲಾಯಿತು.