81ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ – ಹುಟ್ಟುಹಬ್ಬದ ಅಂಗವಾಗಿ ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

81ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ – ಹುಟ್ಟುಹಬ್ಬದ ಅಂಗವಾಗಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ


ರಿಪ್ಪನ್‌ಪೇಟೆ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಪಟ್ಟಣದ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರಿಗೆ ಆರೋಗ್ಯ ಮತ್ತು ರಾಜಕೀಯವಾಗಿ ಇನ್ನೂ ಹೆಚ್ಚಿನ ಶಕ್ತಿ ಕರುಣಿಸಲೆಂದು ವಿನಾಯಕ ಸ್ವಾಮಿಯಲ್ಲಿ ಪ್ರಾರ್ಥಿಸಿದರು.

ಈ ಸಂಧರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಸದಸ್ಯರು ,ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.

81ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ

ರಾಜ್ಯ ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು 81ನೇ ವರ್ಷದ ಜನ್ಮದಿನ. ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಪಡೆದಿರುವ ನಾಯಕನ ಜನ್ಮದಿನಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಶುಭ ಕೋರಿದ್ದಾರೆ.

ಬಗರ್ ಹುಕುಂ, ರೈತಪರ ಹೋರಾಟದ ಮೂಲಕ ರಾಜಕೀಯ ಮುನ್ನಲೆಗೆ ಬಂದು ರಾಜ್ಯದಲ್ಲಿ ಬಿಜೆಪಿ ಸಂಘಟಿಸಿ ಅಧಿಕಾರದ ಗದ್ದುಗೆವರೆಗೂ ತಂದು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ದಾಖಲೆ ಬರೆದಿರುವ ಬಿ.ಎಸ್. ಯಡಿಯೂರಪ್ಪ 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಜಕೀಯ ಕರ್ಮಭೂಮಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಈ ಬಾರಿ ಹುಟ್ಟುಹಬ್ಬನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಬಿಎಸ್​ವೈ ರಾಜಕೀಯ ಹಾದಿ: 

1983ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಯಡಿಯೂರಪ್ಪ ಕಡೆಯದಾಗಿ ಸ್ಪರ್ಧೆ ಮಾಡಿದ 2018ರ ಚುನಾವಣೆವರೆಗೂ ಕೇವಲ 1999ರಲ್ಲಿ ಒಮ್ಮೆ ಸೋತಿರುವುದು ಬಿಟ್ಟರೆ ಉಳಿದ ಎಲ್ಲಾ ಚುನಾವಣೆಯಲ್ಲಿಯೂ ಗೆದ್ದಿದ್ದಾರೆ. 2006ರಲ್ಲಿ ಮೊದಲ ಬಾರಿ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದಾಗ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಮೂಲಕ ಮೊದಲ ಬಾರಿಗೆ ಆಡಳಿತ ಪಕ್ಷದ ಸಾಲಿನ ಕಡೆ ಬಂದರು.

2008ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು ಅಧಿಕಾರ ಹಸ್ತಾಂತರವಾಗದ ಹಿನ್ನೆಲೆಯಲ್ಲಿ ಒಂದು ವಾರಕ್ಕೆ ರಾಜೀನಾಮೆ ನೀಡಿ ಜನತೆಯ ಮುಂದೆ ಹೋದರು ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆದರೆ ಮೂರುವರೆ ವರ್ಷಕ್ಕೆ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಆರೋಪ ಬಂದ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಂತರ ಬಿಜೆಪಿಯಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ಬಿಜೆಪಿ ತೊರೆದು ಕೆಜೆಪಿ ಕಟ್ಟಿ ತಮ್ಮ ಸಾಮರ್ಥ್ಯ ತೋರಿಸಿದರು. ಮರಳಿ ಬಿಜೆಪಿಗೆ ಬಂದು 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಸಂಸದರಾಗಿ ಆಯ್ಕೆಯಾದರು. 2018ರಲ್ಲಿ ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದರೂ ಬಹುಮತ ಸಿಗಲಿಲ್ಲ. ಆದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಬಹುಮತ ಸಿಗದ ಕಾರಣದಿಂದಾಗಿ ಮೂರು ದಿನಕ್ಕೆ ರಾಜೀನಾಮೆ ನೀಡಿದರು.

ಆದರೆ 2019 ರಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿದ್ದರಿಂದಾಗಿ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ನಾಲ್ಕನೇ ಬಾರಿಗೆ ಸಿಎಂ ಆದ ರಾಜ್ಯದ ಮೊದಲ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಎರಡು ವರ್ಷ ಅಧಿಕಾರ ನಡೆಸಿ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರು. ನಂತರ ಚುನಾವಣಾ ರಾಜಕೀಯಕ್ಕೆ ವಿಧಾನ ಘೋಷಿಸಿದರು. ಸದ್ಯ ಕೇಂದ್ರ ಸಂಸದೀಯ ಮಂಡಳಿ ಹಾಗು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿರುವ ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಶಾಸಕ, ವಿಧಾನ ಪರಿಷತ್​ ಸದಸ್ಯ, ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಸರ್ಕಾರದ ಭಾಗವಾಗಿ ಕೆಲಸ ಮಾಡಿರುವ ಯಡಿಯೂರಪ್ಪ, ರಾಜ್ಯಾಧ್ಯಕ್ಷರಾಗಿ ಪಕ್ಷ ಕಟ್ಟಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರದ ಗದ್ದುಗೆವರೆಗೂ ತಂದು ನಿಲ್ಲಿಸಿದ ಹಿರಿಮೆ ಅವರದ್ದು. ಈ ದಿಗ್ಗಜ ನಾಯಕ ಇದೀಗ 80 ವರ್ಷ ಪೂರ್ಣಗೊಳಿಸಿ 81ನೇ ವಸಂತಕ್ಕೆ ಕಾಲಿಟ್ಟಿದ್ದು, ರಾಜ್ಯ ಬಿಜೆಪಿಯ ಎಲ್ಲ ನಾಯಕರು, ಕೇಂದ್ರದ ನಾಯಕರು ಶುಭಾಶಯ ಕೋರಿದ್ದಾರೆ.

Leave a Reply

Your email address will not be published. Required fields are marked *